ಕೇದಾರನಾಥ, ಮೇ 2: ಹಿಮಾಲಯ ದೇವಾಲಯ ಕೇದಾರನಾಥದ ದ್ವಾರಗಳನ್ನು ಇಂದು ತೆರೆಯಲಾಗಿದ್ದು, ಸುಮಾರು 12,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.11,000 ಅಡಿ ಎತ್ತರದಲ್ಲಿರುವ ದೇವಾಲಯದ ಗೇಟ್ ಗಳನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಯಿತು ಎಂದು ಬದರೀನಾಥ್-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳ, ಥೈಲ್ಯಾಂಡ್ ಮತ್ತು ಶ್ರೀಲಂಕಾದಂತಹ ವಿವಿಧ ದೇಶಗಳಿಂದ ತರಲಾದ ಗುಲಾಬಿಗಳು ಮತ್ತು ಚೆಂಡು ಹೂವುಗಳು ಸೇರಿದಂತೆ 54 ಪ್ರಭೇದಗಳ 108 ಕ್ವಿಂಟಾಲ್ ಹೂವುಗಳಿಂದ ಹಿಮಾಲಯ ದೇವಾಲಯವನ್ನು ಅಲಂಕರಿಸಲಾಗಿತ್ತು. ನಾಲ್ಕು ಚಾರ್ ಧಾಮ್ ದೇವಾಲಯಗಳಲ್ಲಿ, 11 ನೇ ಜ್ಯೋತಿರ್ಲಿಂಗವೂ ಆಗಿರುವ ಕೇದಾರನಾಥವು ಅತಿ ಹೆಚ್ಚು ಭಕ್ತರನ್ನು ಸೆಳೆಯುತ್ತದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ.
ಚಳಿಗಾಲದ ವಿರಾಮದ ನಂತರ ತೆರೆಯಲಾಗುವ ಚಾರ್ ಧಾಮ್ ಸರ್ಕ್ಟ್ ನ ಮೂರನೇ ದೇವಾಲಯ ಇದಾಗಿದೆ. ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಏಪ್ರಿಲ್ 30 ರಂದು ಮತ್ತು ಬದರೀನಾಥ್ ದೇವಾಲಯಗಳನ್ನು ಮೇ 4 ರಂದು ತೆರೆಯಲಾಗುವುದು.
ಕೇದಾರನಾಥದ ದ್ವಾರಗಳನ್ನು ತೆರೆಯುವ ಪ್ರಕ್ರಿಯೆಯು ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಯಿತು ಎಂದು ಬಿಕೆಟಿಸಿ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ತಿಳಿಸಿದ್ದಾರೆ.ರಾವಲ್ (ಮುಖ್ಯ ಅರ್ಚಕ) ಭೀಮಾಶಂಕರ್ ಲಿಂಗ್, ಅರ್ಚಕ ಬಾಗೇಶ್ ಲಿಂಗ್, ಕೇದಾರನಾಥ ಶಾಸಕಿ ಆಶಾ ನೌಟಿಯಾಲ್, ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಗಹವಾರ್, ಬಿಕೆಟಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ಪ್ರಸಾದ್ ಥಾಪಿಯಾಲ್. ತೀರ್ಥ ಅರ್ಚಕ ಶ್ರೀನಿವಾಸ್ ಪೋಸ್ಟಿ, ಧಾರ್ಮಿಕ ಮುಖಂಡರು ಮತ್ತು ವೇದಪತಿಗಳು ಪೂರ್ವ ದ್ವಾರದಿಂದ ದೇವಾಲಯವನ್ನು ಪ್ರವೇಶಿಸಿದರು ಮತ್ತು ದ್ವಾರಗಳನ್ನು ತೆರೆಯುವ ಮೊದಲು ದೇವಾಲಯದ ಗರ್ಭಗುಡಿಯ ದ್ವಾರದ ಪೂಜೆಯಲ್ಲಿ
ಭಾಗವಹಿಸಿದರು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು ಮತ್ತು ದೇವಾಲಯದ ಬಾಗಿಲು ತೆರೆದ ನಂತರ ಎಲ್ಲರ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ ಮೊದಲಿಗರು, ದೇಶ ಮತ್ತು ವಿದೇಶಗಳಿಂದ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುವ ಈ ದೇವಾಲಯವು ಚಳಿಗಾಲದ ತಿಂಗಳುಗಳಲ್ಲಿ ಮುಚ್ಚಲ್ಪಡುತ್ತದೆ.
ಈ ಬಾರಿ ಕೇದಾರನಾಥದಲ್ಲಿ ಯಾತ್ರಾರ್ಥಿಗಳಿಗೆ ಹೊಸ ವೈಶಿಷ್ಟ್ಯವೆಂದರೆ ವಾರಣಾಸಿ, ಹರಿದ್ದಾರೆ ಮತ್ತು ಹೃಷಿಕೇಶದಲ್ಲಿ ಗಂಗಾ ಆರತಿ ಮಾದರಿಯಲ್ಲಿ ದೇವಾಲಯದ ಬಳಿ ಮಂದಾಕಿನಿ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ನಡೆಸಲಾಗುವ ಭವ್ಯ ಆರತಿ ಎಂದು ಬಿಕೆಟಿಸಿ ಸಿಇಒ ವಿಜಯ್ ಥಾಪಿಯಾಲ್ ಹೇಳಿದ್ದಾರೆ. ಆರತಿಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಮೂರು ಬದಿಗಳಲ್ಲಿ ರಾಂಪ್ ಗಳನ್ನು ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.