ಬೆಂಗಳೂರು,ಡಿ.6- ಕೇರಳದಿಂದ ಮಾದಕವಸ್ತುಗಳನ್ನು ಖರೀದಿಸಿಕೊಂಡು ಬಂದು ನಗರದಲ್ಲಿ ಮಾರಾ ಮಾಡುತ್ತಿದ್ದ ಡ್ರಗ್ ಪೆಡ್ಲರ್ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ 71 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ, ಹ್ಯಾಶಿಶ್ ಆಯಿಲ್, ಎಂಡಿಎಂಎ ಎಕ್ಸ್ ಟಸಿ ಪಿಲ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಲೇಔಟ್ನ ಚಂದ್ರಾನಗರದ ಮನೆಯೊಂದರಲ್ಲಿ ಇಬ್ಬರು ಮಾದಕವಸ್ತುಗಳನ್ನು ಸಂಗ್ರಹಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಾ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆಂಬ ಮಾಹಿತಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳಕ್ಕೆ ಲಭಿಸಿದೆ.
ಈ ಮಾಹಿತಿ ಆಧರಿಸಿ ಮನೆ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಕೇರಳ ರಾಜ್ಯದ ಪೆಡ್ಲರ್ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೇರಳ ರಾಜ್ಯದಿಂದ ಕಡಿಮೆ ಬೆಲೆಗೆ ಮಾದಕವಸ್ತುಗಳನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದುದ್ದಾಗಿ ಹಾಗೂ ಇದರಲ್ಲಿ ಸಹಚರ ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಆರೋಪಿಯಿಂದ 15.05 ಗ್ರಾಂ ಎಂಡಿಎಂಎ ಕ್ರಿಸ್ಟಲ್, 520 ಗ್ರಾಂ ಹೈಡ್ರೋ ಗಾಂಜಾ, 2 ಕೆಜಿ ಗಾಂಜಾ, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು ಮತ್ತೊಬ್ಬ ಸಹಚರನನ್ನು ನಾಗರಬಾವಿಯ ಬಿಡಿಎ ಕಾಂಫ್ಲೆಕ್ಸ್ ಬಳಿ ವಶಕ್ಕೆ ಪಡೆದು ಸುದೀರ್ಘವಾಗಿ ವಿಚಾರಣೆ ಮಾಡಿದಾಗ ತನ್ನ ಸಹಚರನ ಬಗ್ಗೆ ಮಾಹಿತಿ ನೀಡಿದ್ದು, ಗಾಂಜಾ ಪ್ರಕರಣವೊಂದರಲ್ಲಿ ಬಂಧಿತನಾಗಿ ಹಾಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಫೋನ್ ಮುಖಾಂತರ ಮಾಹಿತಿಯನ್ನು ನೀಡುತ್ತಿದ್ದನು.
ಆತ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಮಾದಕವಸ್ತುವನ್ನು ಪಡೆದುಕೊಂಡು ಹೆಚ್ಚಿನ ಬೆಲೆಗೆ ಫೋರ್ಟರ್ ಮೂಲಕ ಮಾರಾಟ ಮಾಡುತ್ತಿದುದ್ದಾಗಿ ತಿಳಿಸಿದ್ದು, ಮಾದಕವಸ್ತುವನ್ನು ಪಾಪರೆಡ್ಡಿ ಪಾಳ್ಯದ ಸಿಲ್ವರ್ ಜೂಬ್ಲಿ ಶಾಲೆ ಸಮೀಪದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 30 ಎಂಡಿಎಂಎ ಎಕ್ಸ್ ಟಸಿ ಪಿಲ್ಸ್ ಗಳು, 18 ಎಲ್ಎಸ್ಡಿ ಸ್ಟ್ರಿಪ್ಸ್ , 309 ಗ್ರಾಂ ಆಶೀಶ್ ಆಯಿಲ್, 522 ಗ್ರಾಂ ಗಾಂಜಾ, 414 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಒಟ್ಟಾರೆ ಈ ಪ್ರಕರಣದ 71 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ತಂಡ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ನಾಲ್ವರ ಬಂಧನ-ಗಾಂಜಾ ಜಪ್ತಿ:
ಸಾರ್ವಜನಿಕ ಸ್ಥಳದಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿ 8.6 ಲಕ್ಷ ಮೌಲ್ಯದ 8 ಕೆಜಿ 600 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಟಾಟಾನಗರದ ಎನ್ಐಟಿ ಮೈದಾನದಲ್ಲಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸ್ಥಳದ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆ ಗೊಳಪಡಿಸಿದಾಗ ಸಹಚರರಿಂದ ಕಡಿಮೆ ಬೆಲೆಗೆ ಗಾಂಜಾವನ್ನು ತೆಗೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದುದ್ದಾಗಿ ತಿಳಿಸಿದ ಮೇರೆಗೆ ಆರೋಪಿಗಳಿಂದ 8.6 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ಪೆಕ್ಟರ್ ಮಹೇಶ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.