ತಿರುವನಂತಪುರಂ,ಸೆ.11- ಓಣಂ ಹಬ್ಬದ ಪ್ರಯುಕ್ತ ವಿಶ್ವಪ್ರಸಿದ್ದ ಭಾರತದ ಕೇರಳ ರಾಜ್ಯದ ಶ್ರೀ ಶಬರಿಮಲೆ ಅಯ್ಯಪ್ಪ ದೇವಾಲಯವು ತೆರೆಯಲಿದ್ದು, ಸ್ವಾಮಿಯ ದರ್ಶನ ಮಾಡುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.
ಶಬರಿಮಲೆ ಅಯ್ಯಪ್ಪನ ದೇವಸ್ಥಾನದಲ್ಲಿ ಓಣಂ ಆಚರಿಸಲು ಪ್ರತಿ ವರ್ಷ ಶಬರಿಮಲೆ ದೇವಸ್ಥಾನವನ್ನು ತೆರೆಯಲಾಗುತ್ತದೆ. ಅದರಂತೆ ಈ ಬಾರಿಯು ದೇವಾಯಲದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.
ಕೇರಳ ರಾಜ್ಯದಲ್ಲಿ ಈ ವರ್ಷ ಸೆ.15ರಂದು ತಿರುವೋಣಂ ಹಬ್ಬವಿದೆ. ಈ ಸಂದರ್ಭದಲ್ಲಿ 13ರಂದು ಸಂಜೆ 5 ಗಂಟೆಗೆ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಓಣಂ ಹಬ್ಬದ ಪ್ರಯುಕ್ತ ಶಬರಿಮಲೆಗೆ ಬರುವ ಎಲ್ಲಾ ಅಯ್ಯಪ್ಪ ಭಕ್ತರಿಗೆ ಸೆ.15 ಮತ್ತು 16ರಂದು ಭೋಜನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಯ್ಯಪ್ಪ ದೇವರ ದರ್ಶನ ಭಾಗ್ಯವೂ ಸಿಗಲಿದೆ.
ಪುರತಾಸಿ ಮಾಸ ಪೂಜೆಯ ಸಂದರ್ಭದಲ್ಲಿ ದೇವಸ್ಥಾನವು 21ರವರೆಗೆ ತೆರೆದಿರುತ್ತದೆ.ಈ ಸಂದರ್ಭದಲ್ಲಿ ಎಂದಿನಂತೆ ಆನ್‌ಲೈನ್ ಮೂಲಕ ದರ್ಶನದ ಕಾಯ್ದಿರಿಸುವಿಕೆಯ ಆಧಾರದ ಮೇಲೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ದೇವಸ್ಥಾನದ ಅಡಳಿತ ಮಂಡಳಿ ತಿಳಿಸಿದೆ.