ನವದೆಹಲಿ,ಆ.14- ಹೊಸ ಪಡಿತರಚೀಟಿಗಳನ್ನು ನೀಡುವ ಪ್ರಕ್ರಿಯೆಯನ್ನು ಸೆಪ್ಟೆಂಬರ್ನಿಂದ ಆರಂಭಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ಗಾಗಿ 2.95 ಲಕ್ಷ ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ಅರ್ಹರಿಗಾಗಿ ಪರಿಶೀಲನೆ ನಡೆಸಿದಾಗ ಸುಮಾರು 50 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಜಾಗೊಂಡಿವೆ. 2.40 ಲಕ್ಷ ಅರ್ಜಿಗಳನ್ನು ಪರಿಷ್ಕರಿಸಲಾಗಿದೆ ಎಂದರು.
ಇದೇ ರೀತಿ ಆಹಾರ ಇಲಾಖೆಯಲ್ಲಿ ಅರ್ಹರನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ. ಹೊಸದಾಗಿ 90 ಸಾವಿರ ಕಾರ್ಡ್ಗಳಿಗೆ ಬೇಡಿಕೆ ಇದೆ. ಅವುಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಿದ ಬಳಿಕ ಸೆಪ್ಟೆಂಬರ್ನಲ್ಲಿ ಹೊಸ ಕಾರ್ಡ್ಗಳನ್ನು ನೀಡಲು ಆರಂಭಿಸಲಾಗುವುದು ಎಂದು ಹೇಳಿದರು.
ಹೊಸ ಕಾರ್ಡ್ಗಳು ಎಂದರೆ ಅವಿಭಕ್ತ ಕುಟುಂಬಗಳು ವಿಭಜನೆಯಾಗಿದ್ದರೆ, ಮಕ್ಕಳು, ತಂದೆ-ತಾಯಿಯಿಂದ ಬೇರೆ ವಾಸವಾಗಿದ್ದರೆ ಅವರಿಗೆ ಪ್ರತ್ಯೇಕ ಕಾರ್ಡ್ ನೀಡುವ ಕುರಿತು ತಹಸೀಲ್ದಾರ್ ಮತ್ತು ಆಹಾರ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುತ್ತಾರೆ. ಅನಂತರ ಅರ್ಹರಿಗೆ ಕಾರ್ಡ್ಗಳನ್ನು ನೀಡಲಾಗುವುದು ಎಂದರು.
ಸಮೀಕ್ಷೆಯ ವೇಳೆ ಅರ್ಹರು ಮತ್ತು ಅನರ್ಹರನ್ನು ಗುರುತಿಸಲಾಗುವುದು. ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಿದರೆ, ಅನರ್ಹರಿಗೆ ಎಪಿಎಲ್ ಕಾರ್ಡ್ ನೀಡಲಾಗುತ್ತದೆ. ರಾಜ್ಯದಲ್ಲಿ 14 ಲಕ್ಷ ಎಪಿಎಲ್ ಕಾರ್ಡ್ಗಳಿದ್ದು, ಅವರಿಗೆ ಕಡಿಮೆ ದರದಲ್ಲಿ ಅಕ್ಕಿ ನೀಡಲಾಗುವುದು. ಹೆಚ್ಚು ಜನ ಪಡಿತರ ಅಂಗಡಿಗಳಿಂದ ಅಕ್ಕಿ ಖರೀದಿಸುವುದಿಲ್ಲ. ಈ ರೀತಿ ಕಾರ್ಡ್ ಸೌಲಭ್ಯ ಪಡೆದುಕೊಳ್ಳುವವರ ಪ್ರಮಾಣ 1 ರಿಂದ 2 ಲಕ್ಷ ಮಾತ್ರ ಎಂದು ಹೇಳಿದರು.