Wednesday, September 11, 2024
Homeರಾಜಕೀಯ | Politicsಬಡವರಿಗೆ ಮಾತ್ರ ಗ್ಯಾರಂಟಿಗಳನ್ನು ಸೀಮಿತಗೊಳಿಸಲು ಚರ್ಚೆ ಜೋರು

ಬಡವರಿಗೆ ಮಾತ್ರ ಗ್ಯಾರಂಟಿಗಳನ್ನು ಸೀಮಿತಗೊಳಿಸಲು ಚರ್ಚೆ ಜೋರು

ನವದೆಹಲಿ,ಆ.14- ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಪರಿಷ್ಕರಣೆಯಾಗಬೇಕು ಎಂಬ ಬೇಡಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ದೆಹಲಿ ಪ್ರವಾಸದಲ್ಲಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಶ್ರೀಮಂತರಿಗೆ ಹಾಗೂ ಅಗತ್ಯ ಇಲ್ಲದಿರುವವರಿಗೆ ಪಂಚಖಾತ್ರಿ ಯೋಜನೆಗಳ ಸೌಲಭ್ಯ ನೀಡುವುದನ್ನು ಪರಿಷ್ಕರಣೆ ಮಾಡಬೇಕು.

ಎಲ್ಲರಿಗೂ ಸೌಲಭ್ಯ ನೀಡುತ್ತಿರುವುದರಿಂದಾಗಿ ಬೊಕ್ಕಸದ 59 ಸಾವಿರ ಕೋಟಿ ರೂ.ಗಳು ಖರ್ಚಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲದ ಕೊರತೆಯಾಗುತ್ತಿದೆ. ಶಾಸಕರು ಪ್ರತಿ ಕ್ಷೇತ್ರಕ್ಕೂ ವಿಶೇಷ ಅನುದಾನ ಕೇಳುತ್ತಿದ್ದು, ಅದನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಂಚಖಾತ್ರಿ ಯೋಜನೆಗಳನ್ನು ಬಡವರಿಗೆ ಮಾತ್ರ ಸೀಮಿತಗೊಳಿಸಲು ಅವಕಾಶ ನೀಡುವಂತೆ ಹೈಕಮಾಂಡ್ಗೆ ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿಯವರ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದರೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಭಾಗಶಃ ಸಹಮತ ಸೂಚಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಇಬ್ಬರು ಸಚಿವರು, ಹೈಕಮಾಂಡ್ ನಾಯಕರ ಬಳಿಯೂ ತಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಎಚ್.ಸಿ.ಮಹದೇವಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸತೀಶ್ ಜಾರಕಿಹೊಳಿ ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಆದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ತನ್ನ ಪ್ರಣಾಳಿಕೆಗಾಗಿ ಪಂಚಖಾತ್ರಿಗಳ ಭರವಸೆ ನೀಡಿತ್ತು. ಚುನಾವಣೆ ಬಳಿಕ ಅದನ್ನು ಜಾರಿಗೆ ತಂದಿದ್ದೇವೆ.

ಯಾವುದೇ ಬದಲಾವಣೆ ಅಥವಾ ಪರಿಷ್ಕರಣೆಯಾಗಬೇಕಾದರೆ ಸರ್ಕಾರದ ಸಚಿವ ಸಂಪುಟದಲ್ಲಿ ಮತ್ತು ಪಕ್ಷದಲ್ಲಿ ನಿರ್ಧಾರಗಳಾಗಬೇಕು, ಸದ್ಯಕ್ಕೆ ನಮ ಮುಂದೆ ಅಂತಹ ಪ್ರಸ್ತಾಪಗಳಿಲ್ಲ ಎಂದರು.ಜನರ ನಿರೀಕ್ಷೆಗಳು ಬಹಳಷ್ಟಿವೆ. ಅವೆಲ್ಲವನ್ನೂ ಈಡೇರಿಸಲು ಸಂಪನೂಲ ಅಗತ್ಯವಿದೆ. ಇದಕ್ಕಾಗಿ ತೆರಿಗೆ ಸಂಗ್ರಹವನ್ನು ಪ್ರಾಮಾಣಿಕವಾಗಿ ಹೆಚ್ಚಿಸಬೇಕು. ಬೊಕ್ಕಸ ತುಂಬಿ ತುಳುಕಿದಾಗ ಏನು ಬೇಕಾದರೂ ಮಾಡಬಹುದು. ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ಅಗತ್ಯವಿದೆ. ಅವುಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿರುವ ಸಚಿವ ಕೆ.ಎಚ್.ಮುನಿಯಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳಲ್ಲಿ ಬದಲಾವಣೆಗಳಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಸತೀಶ್ ಜಾರಕಿಹೊಳಿಯವರ ಅಭಿಪ್ರಾಯ ವೈಯಕ್ತಿಕವಾದದು. ಬಡವರು, ಕೂಲಿಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಪಂಚಖಾತ್ರಿ ಯೋಜನೆಗಳ ಅಗತ್ಯವಿದೆ. ಬಹುತೇಕ ಯೋಜನೆಗಳನ್ನು ಬಿಪಿಎಲ್ ಕುಟುಂಬಕ್ಕೆ ಸೌಲಭ್ಯ ನೀಡುವ ದೃಷ್ಟಿಯಿಂದ ರೂಪಿಸಲಾಗಿದೆ.

ಒಂದು ವೇಳೆ ಅನರ್ಹರಿದ್ದರೆ ಅದನ್ನು ಪರಿಷ್ಕರಣೆ ಮಾಡುವುದರಲ್ಲಿ ತಪ್ಪಿಲ್ಲ ಎಂದರು. 200 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಕೆ ಮಾಡುವವರ ಸಂಖ್ಯೆ ರಾಜ್ಯದಲ್ಲಿ ಶೇ.5 ರಷ್ಟು ಮಾತ್ರ. ಹೀಗಾಗಿ ಗೃಹಜ್ಯೋತಿ ಎಲ್ಲರಿಗೂ ತಲುಪುತ್ತಿದೆ. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳು ಬಿಪಿಎಲ್ನವರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿದೆ. ಅದರಲ್ಲಿ ಎಪಿಎಲ್ನವರಿದ್ದಾರೆ. ಅನರ್ಹರನ್ನು ಗುರುತಿಸಿ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದವರ ಪೈಕಿ ಬಹಳಷ್ಟು ಮಂದಿಯನ್ನು ಅನರ್ಹಗೊಳಿಸಿ ಅರ್ಜಿ ವಜಾಗೊಳಿಸಲಾಗಿದೆ. ಇನ್ನು ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ ಭತ್ಯೆ ನೀಡುವ ಜೊತೆಗೆ ಔದ್ಯೋಗಿಕ ತರಬೇತಿ ನೀಡಿ ಖಾಯಂ ಕೆಲಸ ಪಡೆದುಕೊಳ್ಳಲು ನೆರವಾಗುವ ಸಂಕಲ್ಪವನ್ನು ಸರ್ಕಾರ ಕೈಗೊಂಡಿದೆ. ಶಕ್ತಿ ಯೋಜನೆ ಸಾರ್ವತ್ರಿಕವಾಗಿ ಬಳಕೆಯಾಗುತ್ತಿದೆ ಎಂದರು.

ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ಬಗ್ಗೆ ಆ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಬಹುದು. ಅನ್ನಭಾಗ್ಯ ಯೋಜನೆಯಲ್ಲಿ ಅನರ್ಹರನ್ನು ಗುರುತಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

RELATED ARTICLES

Latest News