Sunday, September 15, 2024
Homeರಾಜಕೀಯ | Politicsವಿಜಯೇಂದ್ರ-ಯತ್ನಾಳ್ ಬಣಗಳ ನಡುವೆ ಕೇಶವಕೃಪದಲ್ಲಿ 'ಸಂಘ' ಸಂಧಾನ

ವಿಜಯೇಂದ್ರ-ಯತ್ನಾಳ್ ಬಣಗಳ ನಡುವೆ ಕೇಶವಕೃಪದಲ್ಲಿ ‘ಸಂಘ’ ಸಂಧಾನ

ಬೆಂಗಳೂರು,ಆ.14- ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಕೊನೆಗೂ ಸಂಘ ಪರಿವಾರದ ನಾಯಕರು ಮಧ್ಯ ಪ್ರವೇಶಿಸಿದ್ದು, ಇದೇ ತಿಂಗಳ 21 ರಂದು ವಿಜಯೇಂದ್ರ-ಯತ್ನಾಳ್ ಬಣಗಳ ನಡುವೆ ಸಂಧಾನ ಸಭೆ ನಡೆಸಲಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಕೇಶವಕೃಪದಲ್ಲಿ ಆರ್ಎಸ್ಎಸ್ನ ಪ್ರಮುಖರಾದ ಮುಕುಂದ್ ನೇತೃತ್ವದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಒಟ್ಟು 40 ಮಂದಿಯನ್ನು ಸಭೆಗೆ ಆಹ್ವಾನಿಸಲಾಗಿದೆ.

ವಿಜಯೇಂದ್ರ ಬಣದ 20 ಮಂದಿ ಹಾಗೂ ಯತ್ನಾಳ್ ಬಣದ 20 ಮಂದಿ ಮಾತ್ರ ಸಭೆಗೆ ಬರುವಂತೆ ಸಂಘ ಪರಿವಾರದ ನಾಯಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಯಾರೂ ಕೂಡ ಬಲಾಬಲ ಪ್ರದರ್ಶನ ನಡೆಸುವಂತಿಲ್ಲ ಎಂದು ತಾಕೀತು ಮಾಡಿದೆ.

ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರೊಬ್ಬರ ಮನವಿಯಂತೆ ಆರ್ಎಸ್ಎಸ್ ನಾಯಕರು ಸಂಧಾನ ಸಭೆಯನ್ನು ಏರ್ಪಡಿಸಿದ್ದಾರೆ. ಎರಡು ಬಣದವರನ್ನು ಒಟ್ಟಿಗೆ ಕೂರಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

ಕಳೆದ ಒಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ಪಕ್ಷದ ಸಂಘಟನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಎಲ್ಲರೂ ಕೂಡ ಪ್ರತಿಷ್ಠೆಗೆ ಬಿದ್ದವರಂತೆ ನಡೆದುಕೊಳ್ಳುತ್ತಿರುವುದರಿಂದ ಸಮಸ್ಯೆ ಬೃಹದಾಕಾರವಾಗಿ ಬೆಳೆಯುವ ಮೊದಲೇ ಪ್ರಾರಂಭಿಕ ಹಂತದಲ್ಲೇ ಚಿವುಟಿ ಹಾಕಬೇಕೆಂದು ಕೇಂದ್ರದ ಸಚಿವರೊಬ್ಬರು ಆರ್ಎಸ್ಎಸ್ನ ಶಿವಮೊಗ್ಗ ಮೂಲದ ಪ್ರಭಾವಿ ನಾಯಕರ ಜೊತೆ ಮಾತುಕತೆ ನಡೆಸಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೂ ಆತೀಯರಾಗಿರುವ ಆರ್ಎಸ್ಎಸ್ನ ಈ ಪ್ರಭಾವಿ ನಾಯಕರು ಸಾಮಾನ್ಯವಾಗಿ ಬಿಜೆಪಿಯ ಚಟುವಟಿಕೆಗಳಲ್ಲಿ ಮಧ್ಯಪ್ರವೇಶ ಮಾಡುವುದು, ಇಲ್ಲವೇ ತಲೆ ಹಾಕುವುದು ತೀರಾ ವಿರಳ.

ವಿಜಯೇಂದ್ರ, ಬಿಎಸ್ವೈ ಹಾಗೂ ಕೇಂದ್ರ ಸಚಿವರ ಮನವಿ ಮೇರೆಗೆ ಸಭೆ ನಡೆಸುವಂತೆ ಮುಕುಂದ್ ಅವರಿಗೆ ಪ್ರಭಾವಿ ನಾಯಕರು ನಿರ್ದೇಶನ ನೀಡಿದ್ದಾರೆ.ಸಮಸ್ಯೆ ಉಂಟಾಗಲು ಕಾರಣಗಳೇನು ಎಂಬುದರ ಕುರಿತು ವಿಸ್ತೃತವಾಗಿ ವರದಿಯನ್ನು ತರಬೇಕೆಂದು ಎರಡು ಬಣದವರಿಗೆ ಸೂಚನೆ ಕೊಡಲಾಗಿದೆ.

ಮುಡಾ ಪಾದಯಾತ್ರೆ ಯಶಸ್ವಿಯಾಗಿದೆಯೇ? ಪಾದಯಾತ್ರೆ ಆರಂಭಕ್ಕೂ ಮುನ್ನ ಯಾರ್ಯಾರನ್ನು ಆಹ್ವಾನಿಸಲಾಗಿತ್ತು, ಕೆಲವರು ಗೈರು ಹಾಜರಾಗಲು ಕಾರಣಗಳೇನು? ಇತ್ಯಾದಿಗಳನ್ನು ಸವಿಸ್ತಾರವಾಗಿ ನೀಡಬೇಕೆಂದು ವಿಜಯೇಂದ್ರ ಬಣಕ್ಕೆ ಸೂಚನೆ ನೀಡಿದ್ದಾರೆ.

ಇದೇ ರೀತಿ ಯತ್ನಾಳ್ ಬಣಕ್ಕೂ ವಿಜಯೇಂದ್ರ ಮೇಲೆ ಮುನಿಸಿಕೊಳ್ಳಲು ಕಾರಣವೇನು? ಪ್ರತ್ಯೇಕ ಸಭೆ ನಡೆಸಿದ್ದರ ಔಚಿತ್ಯವಾದರೂ ಏನು? ಪಾದಯಾತ್ರೆಗೆ ಏಕೆ ಪಾಲ್ಗೊಳ್ಳಲಿಲ್ಲ? ಪಕ್ಷದ ಚಿಹ್ನೆಯಡಿ ಕೂಡಲಸಂಗಮದಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸುತ್ತೀರಾ? ಇದರಲ್ಲಿ ವಿಜಯೇಂದ್ರ ಭಾಗಿಯಾಗಬೇಕೇ? ಬೇಡವೇ? ಹೊಂದಾಣಿಕೆಯ ರಾಜಕಾರಣ ಪದೇ ಪದೇ ಕೇಳಿಬರುತ್ತಿರುವುದೇಕೆ? ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಡುತ್ತಿರುವುದರ ಬಗ್ಗೆಯೂ ಉತ್ತರಿಸುವಂತೆ ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದೀಗ 21 ರಂದು ಉಭಯ ಬಣಗಳು ಮುಖಾಮುಖಿಯಾಗಲಿದ್ದು, ತಮತಮ ವಾದವನ್ನು ಮುಂದಿಡಲಿದ್ದಾರೆ. ರಾಜ್ಯಾಧ್ಯಕ್ಷನಾದ ಮೇಲೆ ಮಾಡಿರುವ ಸಂಘಟನೆ ಲೋಕಸಭಾ ಚುನಾವಣಾ ಫಲಿತಾಂಶ ದಾವಣಗೆರೆ, ಕಲಬುರಗಿ, ಬೀದರ್, ಚಿಕ್ಕೋಡಿ ಇತರೆ ಕ್ಷೇತ್ರಗಳಲ್ಲಿ ಸೋಲಿಗೆ ಕಾರಣಗಳೇನು? ಎಂಬುದರ ಕುರಿತು ವಿಜಯೇಂದ್ರ ವರದಿ ನೀಡಲಿದ್ದಾರೆ.
ನನ್ನ ಮೇಲೆ ಹೊಂದಾಣಿಕೆ ರಾಜಕಾರಣ ಆರೋಪ ಮಾಡುವವರು ಆಡಳಿತಾರೂಢ ಕಾಂಗ್ರೆಸ್ ನಾಯಕರ ಜೊತೆ ಹೇಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂಬುದನ್ನು ಎಳೆಎಳೆಯಾಗಿ ಬಿಡಿಸಿಡಲಿದ್ದಾರೆ.

ಆರೋಪ-ಪ್ರತ್ಯಾರೋಪಗಳನ್ನು ಮಾಡುವ ಬದಲಿಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ವೈಮನಸ್ಸು ಮರೆತು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಸಂಘ ಪರಿವಾರದ ನಾಯಕರು ಎರಡೂ ಬಣದವರಿಗೆ ಸೂಚನೆ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News