Sunday, September 15, 2024
Homeರಾಜಕೀಯ | Politics"ಖರ್ಗೆ ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ"

“ಖರ್ಗೆ ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ”

Kharge will not return to state politics: Minister Ramalingareddy

ಬೆಂಗಳೂರು,ಆ.24- ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ, ದೆಹಲಿಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮುಂದುವರೆಯಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಯವರು ರಾಜ್ಯ ರಾಜ ಕಾರಣಕ್ಕೆ ಮರಳುವಂತಹ ಯಾವುದೇ ವಿಚಾರಗಳು ಚರ್ಚೆಯಾಗಿಲ್ಲ ಎಂದು ಪುನರುಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅಭಿಯೋಜನೆಗೆ ಅನುಮತಿ ನೀಡಬಾರದು ಎಂದು ಸಚಿವ ಸಂಪುಟ ಸಭೆ ನಿರ್ಧಾರ ತೆಗೆದುಕೊಂಡು ರಾಜ್ಯಪಾಲರಿಗೆ ಸಲಹೆ ನೀಡಿತ್ತು. ಅದನ್ನು ಮೀರಿ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿದ್ದಾರೆ.

ಅದೇ ರೀತಿ ಜೆಡಿಎಸ್‌‍ನ ಮುಖಂಡರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿಯ ಮೂರ್ನಾಲ್ಕು ಶಾಸಕರ ವಿರುದ್ಧದ ಪ್ರಕರಣಗಳಿಗೆ ಅಭಿಯೋಜನೆಗೆ ಅನುಮತಿ ನೀಡಿಲ್ಲ. ಇದು ಪಕ್ಷಪಾತ ಎಂಬುದು ಸ್ಪಷ್ಟವಾಗಿದೆ. ಸಚಿವ ಸಂಪುಟದಲ್ಲಿ ಚರ್ಚೆಯೂ ಆಗಿದೆ ಎಂದರು.

ಆರೋಪಕ್ಕೆ ಗುರಿಯಾದ ಬಹಳಷ್ಟು ನಾಯಕರು ಬಿಜೆಪಿ ಸೇರಿದ್ದಾರೆ. ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್‌, ಎನ್‌ಸಿಪಿ ಪಡೆದು ಬಿಜೆಪಿ ಜೊತೆ ಸೇರಿಕೊಂಡ ಬಳಿಕ ಅವರ ಮೇಲಿನ ಆರೋಪಗಳು ಚರ್ಚೆಯಾಗುತ್ತಿಲ್ಲ. ವಾಷಿಂಗ್‌ ಪೌಡರ್‌ ನಿರ್ಮಾ ಹಾಕಿ ತೊಳೆದಂತಾಗಿದೆ ಎಂದು ಹೇಳಿದರು.

ಹಲವು ರಾಜ್ಯಗಳಲ್ಲಿ ಬಿಜೆಪಿಯವರ ಸರ್ಕಾರಗಳಿವೆ. ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ವಿರುದ್ಧ ಯಾರಾದರೂ ಅಭಿಯೋಜನೆಗೆ ಕೇಳಬಹುದು. ಮುಂದಿನ ದಿನಗಳಲ್ಲಿ ಬಿಜೆಪಿಯವರ ತಂತ್ರಗಾರಿಕೆಗಳೇ ತಿರುಗುಬಾಣವಾಗಲಿವೆ ಎಂದು ಎಚ್ಚರಿಸಿದರು.

ರಾಜ್ಯಸರ್ಕಾರವನ್ನು ಅಸ್ತಿರಗೊಳಿಸಲು ಜೆಡಿಎಸ್‌‍ ಸಂಚು ರೂಪಿಸಿದ್ದು, ಬಿಜೆಪಿಯವರು ಅವರ ಜೊತೆ ಕೈಜೋಡಿಸುವುದು ಕಾಂಗ್ರೆಸ್‌‍ನ ಶಾಸಕಾಂಗ ಸಭೆಯಲ್ಲಿ ಚರ್ಚೆಯಾಗಿದೆ. ನಮ ಪಕ್ಷದ ಶಾಸಕರು ಬಿಜೆಪಿ-ಜೆಡಿಎಸ್‌‍ನವರ ಆಮಿಷಗಳಿಗೆ ಒಳಗಾಗುವುದಿಲ್ಲ. ಎರಡು ಪಕ್ಷಗಳೂ ಸೇರಿ ಏನೇ ಹರಸಾಹಸ ನಡೆಸಿದರೂ ಅದು ಯಶಸ್ವಿಯಾಗುವುದಿಲ್ಲ ಎಂದರು.ಮುಂದಿನ ನಾಲ್ಕು ವರ್ಷಗಳ ಬಳಿಕ ಮತ್ತೆ ವಿಧಾನಸಭಾ ಚುನಾವಣೆ ನಡೆಯಲಿದೆ.

ಕಾಂಗ್ರೆಸ್‌‍ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿ ಕಾಂಗ್ರೆಸ್‌‍ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಕಳೆದ ಒಂದು ತಿಂಗಳಿನಿಂದ ನಡೆದ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ರಾಜ್ಯಪಾಲರ ನಡವಳಿಕೆಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ ಎಂದರು.

ದೆಹಲಿ ಹಾಗೂ ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಪತನಗೊಳಿಸಲು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ರಾಜ್ಯಪಾಲರು ಒಳ್ಳೆಯವರು. ಆದರೆ ಅವರ ಮೇಲೆ ಬೇರೆ ರೀತಿಯ ಒತ್ತಡಗಳಿವೆ. ಹೀಗಾಗಿ ರಾಜ್ಯಪಾಲರ ಸ್ಥಾನಕ್ಕೆ ಚ್ಯುತಿ ತರುವಂತಹ ಕೆಲಸಗಳು ನಡೆಯುತ್ತಿವೆ ಎಂದರು.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಯಾವ ಸಮುದಾಯಕ್ಕೆ ಸೇರಿದವರು ಎಂಬ ಮಾಹಿತಿ ಇಲ್ಲ. ಈ ಹಿಂದೆ ಅವರು ಕೇಂದ್ರದಲ್ಲಿ ಸಚಿವರಾಗಿದ್ದರು. ಬಿಜೆಪಿಯವರಿಗೆ ನೈಜ್ಯವಾಗಿ ಅವರ ಮೇಲೆ ಕಾಳಜಿ ಇದ್ದಿದ್ದರೆ ಅವರನ್ನು ಕೇಂದ್ರ ಸಂಪುಟದಲ್ಲೇ ಮುಂದುವರೆಸಬಹುದಿತ್ತು, ರಾಜ್ಯಪಾಲರನ್ನಾಗಿ ಮಾಡಿದ್ದೇಕೆ? ಆ ಬಳಿಕ ಸಂವಿಧಾನ ವಿರುದ್ಧವಾಗಿ ನಡೆದುಕೊಳ್ಳುವಂತೆ ಒತ್ತಡ ಹೇರುತ್ತಿರುವುದೇಕೆ? ಜನರೆದುರು ರಾಜ್ಯಪಾಲರನ್ನು ಕೆಟ್ಟವರಂತೆ ಬಿಜೆಪಿ ಬಿಂಬಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

ಬಿಜೆಪಿಯವರ ಹಗರಣಗಳನ್ನು ತ್ವರಿತವಾಗಿ ಚರ್ಚೆ ನಡೆಸಲಾಗುತ್ತಿದೆ. ಕೆಲವು ಪ್ರಕರಣಗಳಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಅವನ್ನು ತೆರವುಗೊಳಿಸಲು ಪ್ರಯತ್ನಿಸಲಾಗುವುದು. ಬಿಜೆಪಿಯವರು ಸತ್ಯ ಹರಿಶ್ಚಂದ್ರರಂತೆ ಆಡುತ್ತಿದ್ದಾರೆ. ಹಲವಾರು ಹಗರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ತಿರುಗೇಟು ನೀಡಿದರು.

RELATED ARTICLES

Latest News