Sunday, July 14, 2024
Homeರಾಷ್ಟ್ರೀಯರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಮೋದಿಗೆ ಆಹ್ವಾನ : ಪ್ರತಿಪಕ್ಷಗಳು ಕೆಂಡ

ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಮೋದಿಗೆ ಆಹ್ವಾನ : ಪ್ರತಿಪಕ್ಷಗಳು ಕೆಂಡ

ನವದೆಹಲಿ,ಅ.26- ಅಯೋಧ್ಯೆಯಲ್ಲಿ ನಿರ್ಮಾಣ ವಾಗುತ್ತಿರುವ ಮಂದಿರದಲ್ಲಿ ಮುಂದಿನ ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರಮೋದಿಯವರಿಗೆ ಆಹ್ವಾನ ನೀಡಿರುವುದನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ.ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲು ನರೇಂದ್ರಮೋದಿ ಅವರಿಗೆ ಆಹ್ವಾನವನ್ನು ನೀಡಿರುವ ಟ್ರಸ್ಟ್ ಕ್ರಮಕ್ಕೂ ಟೀಕಾ ಪ್ರಹಾರ ನಡೆಸಿರುವ ಪ್ರತಿಪಕ್ಷಗಳು, ಇದೇನು ಬಿಜೆಪಿ ಕಾರ್ಯಕ್ರಮವೇ ಎಂದು ಪ್ರಶ್ನಿಸಿವೆ.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲು ಪ್ರಧಾನಿಗೆ ಆಹ್ವಾನ ಕೊಟ್ಟಿರುವುದು ಏಕೆ? ಕೇವಲ ಬಿಜೆಪಿಯನ್ನು ಮಾತ್ರ ಆಹ್ವಾನಿಸಿ ಉಳಿದ ಪಕ್ಷಗಳನ್ನು ಕಡೆಗಣಿಸಿರುವ ಟ್ರಸ್ಟ್‍ನ ದುರದ್ದೇಶವೇನು ಎಂದು ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಪ್ರಶ್ನಿಸಿದ್ದಾರೆ.

ಟ್ರಸ್ಟ್‍ನ ಕ್ರಮವನ್ನು ನೋಡಿದರೆ ಇದು ಬಿಜೆಪಿ ಕಾರ್ಯಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ದೇವರು ಎಲ್ಲರಿಗೂ ಸೇರಿದ್ದಾನೆ. ಇದರಲ್ಲಿ ತಾರತಮ್ಯ ಮಾಡುವುದು ಏಕೆ. ಬಿಜೆಪಿಯನ್ನು ಆಹ್ವಾನಿಸಿ ಉಳಿದ ಪಕ್ಷಗಳನ್ನು ಕಡೆಗಣಿಸಿದರೆ ನಮಗೆ ರಾಮನ ಮೇಲೆ ಭಕ್ತಿ ಇಲ್ಲವೆ ಎಂಬುದನ್ನು ಬಿಂಬಿಸಲು ಟ್ರಸ್ಟ್ ಹೊರಟಂತಿದೆ ಎಂದು ಕಿಡಿಕಾರಿದರು.

“ಬಿಜೆಪಿ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ, ಬಾಯಿ ಚಟಕ್ಕೆ ಮಾತಾಡ್ತಾರೆ”

ಶಿವಸೇನೆ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕೂಡ ವಿರೋಧ ವ್ಯಕ್ತಪಡಿಸಿದ್ದು, ರಾಮಮಂದಿರ ನಿರ್ಮಾಣವಾಗಬೇಕೆಂಬುದು ಶತಕೋಟಿ ಭಾರತೀಯರ ಕನಸು, ಆದರೆ ಮೂರ್ತಿ ಪ್ರತಿಷ್ಠಾಪನೆಗೆ ಒಂದು ಪಕ್ಷವನ್ನು ಪ್ರತಿನಿಸುವ ಪ್ರಧಾನಿಯನ್ನು ಆಹ್ವಾನಿಸಿ ಬೇರೆಯವರಿಗೆ ಆಹ್ವಾನ ಕೊಡದಿರುವುದು ಯಾವ ಕಾರಣಕ್ಕೆ? ಶ್ರೀರಾಮ ಕೇವಲ ಬಿಜೆಪಿಗೆ ಮಾತ್ರ ಸೇರಿದ್ದಾರೆಯೇ? ನಾವು ಕೂಡ ರಾಮನ ಭಕ್ತರು ಎಂದು ಹೇಳಿದರು.

ರಾಮಮಂದಿರ ಬಿಜೆಪಿ ಇಲ್ಲವೇ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಸನಾತನ ಧರ್ಮದ ಅತ್ಯಂತ ದೊಡ್ಡ ಸಂಕೇತ ಶ್ರೀರಾಮ. ರಾಮಮಂದಿರವನ್ನು ನಿರ್ಮಿಸುತ್ತಿರುವುದಕ್ಕೆ ಎಲ್ಲರೂ ಹೆಮ್ಮೆ ಪಡುತ್ತೇವೆ. ಆದರೆ ಇದರಲ್ಲಿ ಕ್ಷುಲ್ಲಕ ರಾಜಕಾರಣವನ್ನು ನಾವು ಸಹಿಸುವುದಿಲ್ಲ ಎಂದು ಗುಡುಗಿದರು.

RELATED ARTICLES

Latest News