Thursday, December 7, 2023
Homeರಾಜ್ಯಸ್ವಾಭಿಮಾನಿ ಹೋರಾಟಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಸ್ಪೂರ್ತಿ : ಸಿಎಂ ಸಿದ್ದರಾಮಯ್ಯ

ಸ್ವಾಭಿಮಾನಿ ಹೋರಾಟಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಸ್ಪೂರ್ತಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು ಅ.13- ಕಿತ್ತೂರು ರಾಣಿ ಚನ್ನಮ್ಮ, ಟಿಪ್ಪು ಸುಲ್ತಾನ್ ಸ್ವಾಭಿಮಾನಿ ಹೋರಾಟದ ಸೂರ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತ ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ ತನ್ನ ಸಣ್ಣ ಸೈನ್ಯದಿಂದ ಬ್ರಿಟಿಷರ ಬೃಹತ್ ಸೈನ್ಯಕ್ಕೆ ಸೆಡ್ಡು ಹೊಡೆದ ಧೀಮಂತ ರಾಣಿ.

ಈಕೆಯ ಧೈರ್ಯ ಮತ್ತು ಆದರ್ಶ ಯುವ ಸಮೂಹವನ್ನು, ಇವತ್ತಿನ ಪೀಳಿಗೆಯನ್ನು ತಲುಪಬೇಕು ಎನ್ನುವ ಕಾರಣಕ್ಕೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಕಿತ್ತೂರು ಉತ್ಸವ ಮತ್ತು ಜಯಂತ್ಸೋವವನ್ನು ಆರಂಭಿಸಿದೆ ಎಂದು ವಿವರಿಸಿದರು.

ರಾಜ್ಯದ 216 ತಾಲ್ಲೂಕುಗಳು ಬರಪೀಡಿತ ; ಸರ್ಕಾರ ಘೋಷಣೆ

ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ಕಿತ್ತೂರಿನಲ್ಲಿ ಕಿತ್ತೂರು ಉತ್ಸವ ನಡೆಯುತ್ತಿದೆ. ಅದರ ಪ್ರಯುಕ್ತ ವಿಜಯ ಜ್ಯೋತಿ ಬೆಂಗಳೂರಿನ ವಿಧಾನಸೌಧದಿಂದ ಪ್ರಾರಂಭವಾಗುತ್ತಿದ್ದು, ರಾಜ್ಯದ ಅನೇಕ ಪ್ರದೇಶಗಳಿಗೆ ಭೇಟಿ ನೀಡಿ, ಅ.23ರಂದು ಕಿತ್ತೂರಿಗೆ ತಲುಪಲಿದೆ. ಆ ದಿನ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ಮೊದಲ ಯುದ್ಧದಲ್ಲಿ ಜಯ ಗಳಿಸಿದ ದಿನವೇ ಅ.23 ಎಂದರು.

ಯುದ್ಧದ ವೇಳೆ ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮರ ಬಲಗೈ ಬಂಟನಾಗಿದ್ದ. ಅನೇಕ ರಾಜರೂ ಬ್ರಿಟಿಷರಿಗೆ ಶರಣಾಗಿದ್ದ ಕಾಲದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಶರಣಾಗಲಿಲ್ಲ. ಝಾನ್ಸಿರಾಣಿ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಅವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಬಲಾಢ್ಯರಾಗಿದ್ದ ಬ್ರಿಟಿಷರ ವಿರುದ್ಧ ಹೋರಾಟ ಮಾಡಬೇಕಾದರೆ ಧೈರ್ಯ ಇರಬೇಕಿತ್ತು ಎಂದರು.

ಕಿತ್ತೂರು ರಾಣಿ ಕುರಿತು ಸಿನಿಮಾ ಒಂದು ಬಂದಿತ್ತು, ಅದರಲ್ಲಿ ಆಕೆಯ ಧೈರ್ಯ ಸಾಹಸ ಸ್ಪಷ್ಟವಾಗಿ ಕಾಣುತ್ತದೆ. ಹೊರಗಿನಿಂದ ಬಂದ ನಿಮಗೆ ಏಕೆ ಕಪ್ಪ ಕೊಡಬೇಕು ಎಂದು ಕಿತ್ತೂರು ರಾಣಿ ಪ್ರಶ್ನಿಸಿದರು. ನಾಡನ್ನು ಪ್ರತಿಯೊಬ್ಬರು ಪ್ರೀತಿಸಬೇಕು, ಸ್ವಾಭಿಮಾನ, ದೇಶ ಪ್ರೇಮ ಇದ್ದವರಿಗೆ ಮಾತ್ರ ದೇಶದ ಬಗ್ಗೆ ಪ್ರೀತಿ, ಗೌರವ ಇರುತ್ತದೆ. ಹತ್ತೊಂಬತ್ತನೆ ಶತಮಾನದಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಅದನ್ನು ಸಾಬೀತು ಮಾಡಿದ್ದಾರೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ದೇಶದ ಆಸ್ತಿ. ತಾವು ಮುಖ್ಯಮಂತ್ರಿಯಾಗುವವರೆಗೂ ಯಾರು ಅವರ ಜಯಂತ್ಯೋತ್ಸವ ಆಚರಣೆ ಮಾಡಿರಲಿಲ್ಲ. ಅವರ ಬಗ್ಗೆ ಮಾತನಾಡುವುದರಿಂದ ದೇಶ ಪ್ರೇಮ ಹೆಚ್ಚಾಗುತ್ತದೆ. ನಾವು ನಮ್ಮ ತಾಯ್ನಾಡನ್ನು ಪ್ರೀತಿಸಲೇಬೇಕು ಎಂದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿ, ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ್, ಧಾರವಾಡ ಗ್ರಾಮೀಣ ಶಾಸಕರಾದ ವಿನಯ್ ಕುಲಕರ್ಣಿ, ಬೈಲಹೊಂಗಲ ಶಾಸಕರಾದ ಮಹಂತೇಶ ಕೌಜಲಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

RELATED ARTICLES

Latest News