ಬೆಂಗಳೂರು, ಅ.8-ಮೈದಾನದಲ್ಲಿ ತಮ್ಮ ಮೃದು ಸ್ವಭಾವದಿಂದ ಗಮನ ಸೆಳೆಯುವ ಖ್ಯಾತ ಕ್ರಿಕೆಟಿಗ , ಕನ್ನಡಿಗ ಕೆ.ಎಲ್.ರಾಹುಲ್ ಅವರು ಕ್ರಿಕೆಟ್ ಮೈದಾನದ ಹೊರಗೂ ತಮ್ಮ ಸಾಮಾಜಿಕ ಕಾರ್ಯಗಳಿಂದ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ಅಂಧ ಸಂಸ್ಥೆಯೊಂದಿಗೆ ತಮ್ಮ ಚಾರಿಟಿ ಮೂಲಕ ಹರಾಜು ಪ್ರಕ್ರಿಯೆ ನಡೆಸಿ ಸುಮಾರು 2 ಕೋಟಿಗೂ ಹೆಚ್ಚು ಹಣವನ್ನು ರಾಹುಲ್ ಅವರು ತಮ್ಮ ಪತ್ನಿ ಅಥಿಯಾಶೆಟಿ ಜೊತೆಗೆ ಸಂಗ್ರಹಿಸಿದ್ದರು. ಈಗ ಬಾಗಲಕೋಟೆಯಲ್ಲಿ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಯೊಬ್ಬರ ವಿದ್ಯಾಭ್ಯಾಸಕ್ಕೆ ರಾಹುಲ್ ಆರ್ಥಿಕ ನೆರವು ನೀಡಿ ಗಮನ ಸೆಳೆದಿದ್ದಾರೆ.
ರಾಹುಲ್‌ರಿಂದ ಆರ್ಥಿಕ ಸಹಾಯ ಪಡೆದ ವಿದ್ಯಾರ್ಥಿ ಅಮೃತ್ ಮಾವಿನಕಟ್ಟೆ ಸುದ್ದಿಗಾರರೊಂದಿಗೆ ಮಾತನಾಡಿ, `ನಾನು ಬಡತದಿಂದ ಬಂದ ವಿದ್ಯಾರ್ಥಿಯಾಗಿದ್ದು ಕಳೆದ ವರ್ಷ ರಾಹುಲ್ ಅವರು ತನ್ನ ಕಾಲೇಜು ಫೀಜ್ ಕಟ್ಟಿದ್ದರು.
ಇದರಿಂದ ಸೂರ್ತಿ ಪಡೆದು ಶೇ. 90ರಷ್ಟು ಅಂಕ ಪಡೆದೆ. ಈ ಬಾರಿಯೂ 75 ಸಾವಿರ ಫೀಜ್ ಕಟ್ಟಿದ್ದು ನನ್ನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ಈ ಹಿಂದೆ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 11 ವರ್ಷದ ಮಗುವಿನ ಜೀವ ಉಳಿಸಲು ಕೆ.ಎಲ್.ರಾಹುಲ್ ಅವರು 31 ಲಕ್ಷ ರೂ. ಸಹಾಯಧನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.