ಕೊಡಗು. ಮೇ 11- ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಕೊಲೆ ಮಾಡಿ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಸೋಮವಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಮಿಯಾಲ ಗ್ರಾಮದ ಮೊನ್ನಂಡ ಪ್ರಕಾಶ್ (32) ಬಂಧಿತ ಆರೋಪಿ.
ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ಗ್ರಾಮದ ನಿವಾಸಿ ಸುಬ್ರಹಣಿ ಎಂಬುವವರ ಪುತ್ರಿ ಮೀನಾ (16) ಜೊತೆ ಪ್ರಕಾಶ್‌ಗೆ ಮದುವೆ ನಿಶ್ಚಿಯವಾಗಿ ನಿಶ್ಚಿತಾರ್ಥವಾಗಿತ್ತು. ಅಪ್ರಾಪ್ತ ಬಾಲಕಿಗೆ ಬಾಲ್ಯವಿವಾಹ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಕುಟುಂಬದವರಿಗೆ ಮನವರಿಕೆ ಮಾಡಿ ಮದುವೆ ನಿಲ್ಲಿಸಿದ್ದರು.
ಇದರಿಂದ ಕೋಪಗೊಂಡ ಪ್ರಕಾಶ್ ಮೊನ್ನೆ ಸಂಜೆ ಬಾಲಕಿ ಮನೆಗೆ ಹೋಗಿ ಪೋಷಕರೊಂದಿಗೆ ಜಗಳವಾಡಿ ಆಕೆಯನ್ನು ಮನೆಯಿಂದ ಎಳೆದೊಯ್ದು ಮಚ್ಚಿನಿಂದ ತಲೆ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿ ರುಂಡದೊಂದಿಗೆ ಪರಾರಿಯಾಗಿದ್ದನು.
ಈ ಬಗ್ಗೆ ಸೋಮವಾರ ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳದಲ್ಲಿ ದೊರೆತ ಮಚ್ಚು ಹಾಗೂ ಬಾಲಕಿಯ ಮುಂಡವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಅರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಾಲಕಿ ರುಂಡ ಪತ್ತೆ:
ಹತ್ಯೆ ನಡೆಸಿದ ಸ್ಥಳದಲ್ಲಿ ಬಾಲಕಿ ಮುಂಡ ಮಾತ್ರ ಪತ್ತೆಯಾಗಿತ್ತು. ರುಂಡಕ್ಕಾಗಿ (ತಲೆ) ಪೊಲೀಸ್ ತಂಡವೊಂದು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಪೊಲೀಸರು ಆರೋಪಿ ಪ್ರಕಾಶ್‌ನನ್ನು ಸ್ಥಳ ಮಹಜರಿಗೆ ಹಾಗೂ ಬಾಲಕಿಯ ರುಂಡಪತ್ತೆಗಾಗಿ ಕರೆದುಕೊಂಡು ಹೋಗಿದ್ದರು.
ಹತ್ಯೆ ನಡೆಸಿದ ಸ್ಥಳದಿಂದ ರುಂಡವನ್ನು ತೆಗೆದುಕೊಂಡು ಹೋಗಿ 300 ಮೀಟರ್ ದೂರದ ಪೊದೆಯಲ್ಲಿಟ್ಟಿರುವುದನ್ನು ಆರೋಪಿ ಪೊಲೀಸರಿಗೆ ತೋರಿಸಿದ್ದು, ಪೊಲೀಸರು ಪೊದೆಯಲ್ಲಿದ್ದ ಬಾಲಕಿ ರುಂಡವನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.