Saturday, July 27, 2024
Homeರಾಷ್ಟ್ರೀಯಸೋಮವಾರ 4ನೇ ಹಂತದ ಚುನಾವಣೆ, 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಮತದಾನ

ಸೋಮವಾರ 4ನೇ ಹಂತದ ಚುನಾವಣೆ, 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಮತದಾನ

ನವದೆಹಲಿ,ಮೇ11- ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ 10 ರಾಜ್ಯಗಳ 96 ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದ್ದು, ಇದೇ ಸಮಯದಲ್ಲಿ ಆಂಧ್ರಪ್ರದೇಶ ವಿಧಾನಸಭೆಗೂ ಚುನಾವಣೆ ನಡೆಯಲಿದೆ.

ನಾಲ್ಕನೇ ಹಂತದ ಲೋಕಸಭೆ ಹಾಗೂ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮೇ 13ರಂದು ಆಂಧ್ರಪ್ರದೇಶದ 25, ತೆಲಂಗಾಣದ 17 ಸೇರಿ 43 ಕ್ಷೇತ್ರಗಳಿಗೆ ಒಂದೇ ಅವಧಿಗೆ ಚುನಾವಣೆ ನಡೆಯಲಿದೆ.

ಬಿಹಾರದ 40 ಕ್ಷೇತ್ರಗಳ ಪೈಕಿ 5, ಜಾರ್ಖಂಡ್‌ನ 14 ಕ್ಷೇತ್ರಗಳ ಪೈಕಿ 4, ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ 8, ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ 11, ಒಡಿಶಾದ 21 ಕ್ಷೇತ್ರಗಳ ಪೈಕಿ 4, ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 13, ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ 8, ಜಮ್ಮು ಕಾಶ್ಮೀರದ 5 ಕ್ಷೇತ್ರಗಳ ಪೈಕಿ 1 ಸೇರಿ ಒಟ್ಟು 96 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಉತ್ತರಪ್ರದೇಶದ ಕನೂಜ್‌ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌, ಪಶ್ಚಿಮ ಬಂಗಾಳದ ಕೃಷ್ಣಾನಗರದಲ್ಲಿ ಟಿಎಂಸಿಯಿಂದ ಸಂಸದೆ ಮಹು ಮೋಹಿತ್ರಾ, ಬಿಹಾರದ ಬೇಗುಸರಾಯ್‌ ಕ್ಷೇತ್ರದಿಂದ ಗಿರಿರಾಜ ಸಿಂಗ್‌ ಬಿಜೆಪಿಯಿಂದ, ಆಂಧ್ರಪ್ರದೇಶದ ಕಡಪದಲ್ಲಿ ಕಾಂಗ್ರೆಸ್‌‍ನಿಂದ, ಹಾಲಿ ಮುಖ್ಯಮಂತ್ರಿ ವೈ.ಎಸ್‌‍.ಜಗನ್‌ ಮೋಹನ್‌ ರೆಡ್ಡಿ ಅವರ ಸಹೋದರಿ ವೈ.ಎಸ್‌‍.ಶರ್ಮಿಳಾ, ಪಶ್ಚಿಮ ಬಂಗಾಳದ ಅಸ್ನೋಲ್‌ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಿರಿಯ ನಟರೂ ಆದ ಶತ್ರುಘ್ನ ಸಿನ್ಹಾ , ತೆಲಂಗಾಣದ ಹೈದರಾಬಾದ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಧವಿ ಲತಾ ಕಣದಲ್ಲಿರುವ ಪ್ರಮುಖರಾಗಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏ.25ರವರೆಗೆ 4,264 ಉಮೇದುವಾರಿಕೆಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆ ಬಳಿಕ 1970 ನಾಮಪತ್ರಗಳು ಊರ್ಜಿತಗೊಂಡಿದ್ದು, 1717 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಜಿದ್ದಾಜಿದ್ದಿನ ಕಣ: ಲೋಕಸಭೆಯ ಜೊತೆಗೆ ವಿಧಾನಸಭೆಗೂ ಚುನಾವಣೆ ನಡೆಯುತ್ತಿರುವುದರಿಂದ ಆಂಧ್ರಪ್ರದೇಶ ಜಿದ್ದಾಜಿದ್ದಿನ ಕಣವಾಗಿದೆ. 175 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲಕ್ಕೆ ಒಂದೇ ಅವಧಿಗೆ ಚುನಾವಣೆ ನಡೆಯುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಮುಖವಾಗಿರುವ ತೆಲಂಗಾಣ, ಆಂಧ್ರಪ್ರದೇಶದಲ್ಲಿ ತೆಲುಗು ನಾಡಿನ ಒಲವು ಗಳಿಸಬೇಕು ಎಂಬ ಕಾರಣಕ್ಕಾಗಿ ಪ್ರಾದೇಶಿಕ ಪಕ್ಷಗಳೊಂದಿಗೆ ರಾಷ್ಟ್ರೀಯ ಪಕ್ಷಗಳು ಜಿದ್ದಿಗೆ ಬಿದ್ದಿವೆ.

ವೈಎಸ್‌‍ಆರ್‌ ಕಾಂಗ್ರೆಸ್‌‍ನ ಆಡಳಿತವನ್ನು ಹತ್ತಿಕ್ಕಿ ವಿಧಾನಸಭೆಯನ್ನು ಗೆಲ್ಲಲು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತಾಲಿವುಡ್‌ನ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಜನಸೇನಾ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿವೆ.

ಕಾಂಗ್ರೆಸ್‌‍ ಏಕಾಂಗಿಯಾಗಿ ಸ್ಪರ್ಧೆ ನಡೆಸಿದೆ. ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಷಾ ತಮ ಮಿತ್ರಕೂಟದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಕಾಂಗ್ರೆಸ್‌‍ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಕರ್ನಾಟಕದಿಂದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್‌ ಅವರು ಆಂಧ್ರಪ್ರದೇಶಕ್ಕೆ ತೆರಳಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ.

4ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಬಹುತೇಕ ಕ್ಷೇತ್ರಗಳು ಜನಾಭಿಪ್ರಾಯ ಪಡೆಯಲಿವೆ. ಹೀಗಾಗಿ ಸೋಮವಾರ ನಡೆಯುವ ಮತದಾನ ತೀವ್ರ ಕುತೂಹಲ ಕೆರಳಿಸಿವೆ.

RELATED ARTICLES

Latest News