ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹರಿಹಾಯ್ದ ಸಚಿವ ಈಶ್ವರಪ್ಪ

ಶಿವಮೊಗ್ಗ. ಫೆ.11: ಕುಡಿಯುವ ನೀರು ಫೂರೈಸುವ ಕೊಳವೆ ಮಾರ್ಗ ಹಾಳಾಗಿ ಕೊಳಚೆ ನೀರು ಅದಕ್ಕೆ ಸೇರುವ ಸಾಧ್ಯತೆ ಇದ್ದರೂ ಅದನ್ನು ತ್ವರಿತವಾಗಿ ಸರಿಪಡಿಸದ ಅಧಿಕಾರಿಗಳ ಮೇಲೆ ಸಚಿವ ಕೆ.ಎಸï.ಈಶ್ವರಪ್ಪ ಹರಿಹಾಯ್ದ ಘಟನೆ ಇಂದು ನಡೆಯಿತು. ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಗಳ ಖುದ್ದು ಪರಿಶೀಲನೆ ನಡೆಸಿದ ಅವರು, ಜನರ ಅಪೇಕ್ಷೆಗೆ ಸ್ಪಂದಿಸಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕುವೆಂಪು ರಸ್ತೆಯಲ್ಲಿ ದೊಡ್ಡ ಪೈಪ್‍ಲೈನ್ ಅಳವಡಿಕೆ ವೇಳೆ ಕುಡಿಯುವ ನೀರು ಪೂರೈಕೆ ಮತ್ತು ಒಳಚರಂಡಿ ಸಂಪರ್ಕದ ಪೈಪ್ ಗೆ ಹಾನಿಯಾಗಿ ನಾಲ್ಕಾರು ದಿನ ಕಳೆದರೂ ಇದನ್ನು ಸರಿಪಡಿಸದ ಬಗ್ಗೆ ಸ್ಥಳೀಯ ನಾಗರೀಕರು ಸಚಿವರೆದುರು ಪ್ರಸ್ತಾಪಿಸಿ ಮೂರು ದಿನದಿಂದ ನೀರು ಪೂರೈಕೆ ಮಾಡಿಲ್ಲ ಎಂದರು. ಆಗ ಸಚಿವ ಈಶ್ವರಪ್ಪ ನವರು ಸ್ಥಳದಲ್ಲಿದ್ದ ಪಾಲಿಕೆ ಆಯುಕ್ತ ಮತ್ತು ನೀರು ಸರಬರಾಜು ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ರೀತಿಯ ಘಟನೆ ನಡೆದಾಗ ಜನರು ದೂರುವ ಮೊದಲು ಇದನ್ನು ಸರಿಪಡಿಸಬೇಕಾದ ಜವಾಬ್ದಾರಿ ನಿಮಗಿಲ್ಲವೇ? ಎಂದು ಪ್ರಶ್ನಿಸಿದರಲ್ಲದೆ, ಇಂದು ಸಂಜೆಯೊಳಗಾಗಿ ಇದನ್ನು ಸರಿಪಡಿಸಲು ಸೂಚಿಸಿದರು. ಮನೆಗಳಿಗೆ ಯುಜಿ ಕೇಬಲ್ ಅಳವಡಿಸುವ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ಸಚಿವರು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.

ರಸ್ತೆ ಬದಿಯ ಚರಂಡಿ ಮತ್ತು ಅದರ ಮೇಲೆ ಅಳವಡಿಸುವ ಸ್ಲಾಬ್ ಕಾಮಗಾರಿ ಅರ್ಧಕ್ಕೆ ನಿಂತು ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ಕಾಂಕ್ರೀಟ್ ಗೆ ಸರಿಯಾಗಿ ನೀರು ಹಾಕಿ ಕ್ಯೂರಿಂಗ್ ಮಾಡದಿರುವ ಬಗ್ಗೆ ಸಾರ್ವಜನಿಕ ರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ ಈ ಕಾಮಗಾರಿಯ ಗುತ್ತಿಗೆಯನ್ನು ರದ್ದು ಪಡಿಸಿ ಬೇರೊಬ್ಬ ಕಂಟ್ರಾಕ್ಟರ್ ಮೂಲಕ ಕೂಡಲೇ ಸರಿಯಾಗಿ ಕಾಮಗಾರಿ ಮಾಡಿಸುವಂತೆ ಆಯುಕ್ತ ರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್, ಆಯುಕ್ತ ಚಿದಾನಂದ ವಟಾರೆ ಮತ್ತಿತರರು ಸಚಿವರೊಂದಿಗಿದ್ದರು.