ಶಿವಮೊಗ್ಗ,ಮಾ.18- ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುವಲ್ಲಿ ವಿಜಯೇಂದ್ರ ಯಶಸ್ವಿಯಾಗಲಿ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹಾರೈಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚ ಭಾರತದ ಲೋಕಸಭಾ ಚುನಾವಣೆಯನ್ನು ಎದುರು ನೋಡುತ್ತಿದೆ. ನಮ್ಮ ದೇಶದ ಪ್ರತಿ ಹಳ್ಳಿಯ ಜನ ಮೋದಿ ಮೋದಿ ಎನ್ನುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು 25 ಸ್ಥಾನ ಗೆದ್ದಿದ್ದೇವೆ. ಈ ಬಾರಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‍ನವರು ದೇಶದಲ್ಲಿ ಬಿಜೆಪಿ ಒಡೆದ ಮನೆ ಅನ್ನುತ್ತಿದ್ದಾರೆ. ಇಡೀ ದೇಶದಲ್ಲಿ ಬಿಜೆಪಿ ಪಕ್ಷ ಒಂದೇ ಇದೆ. ಆದರೆ ಕನ್ಯಾಕುಮಾರಿಯಿಂದ ಕಾಶ್ಮೀರ ತನಕ ಒಂದೇ ಒಂದು ಕಾಂಗ್ರೆಸ್ ಪಕ್ಷ ಒಟ್ಟಿಗೆ ಇಲ್ಲ. ಕರ್ನಾಟಕದಲ್ಲೂ ಕೂಡ ಕಾಂಗ್ರೆಸ್ ಎಷ್ಟು ಹೋಳಾಗಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಟಕ್ಕರ್ ನೀಡಿದರು. ಕುಟುಂಬ ರಾಜಕಾರಣದ ಬಗ್ಗೆ ಟ್ವೀಟ್ ಮಾಡುವ ಅಧಿಕಾರ ಕಾಂಗ್ರೆಸ್‍ಗೆ ಇದೆಯೇ ಎಂಬುದು ನನ್ನ ಪ್ರಶ್ನೆ. ಕಾಂಗ್ರೆಸ್‍ನಲ್ಲಿ ನೆಹರು, ಇಂದಿರಾಗಾಂಧಿ ಕುಟುಂಬದವರೇ ಆಳಿದ್ದಾರೆ. ಕಾಂಗ್ರೆಸ್ ಪಕ್ಷ ಇರುವುದೇ ಒಂದು ಕುಟುಂಬದ ಹಿಡಿತದಲ್ಲಿ ಎಂದು ಕಿಡಿಕಾರಿದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ವಿರೋಧವೇ ಇದೆ. ಬಿಜೆಪಿ ಪಕ್ಷ ವ್ಯಕ್ತಿ ಮೇಲೆ ನಿಂತಿಲ್ಲ, ಪಕ್ಷ ಉಳಿಸಬೇಕು ಎಂದಿರುವ ಪಕ್ಷ. ನಮ್ಮ ಎಲ್ಲಾ ನಾಯಕರು ಒಟ್ಟಿಗೆ ಇರುತ್ತೇವೆ. ಬಿಜೆಪಿಯಲ್ಲಿ ಸ್ಥಾನಮಾನದ ಪ್ರಶ್ನೆ ಇಲ್ಲ. ಪಕ್ಷದಲ್ಲಿ ಎಲ್ಲರೂ ಕಾರ್ಯಕರ್ತರೇ. ಪ್ರಧಾನಮಂತ್ರಿ ಮೋದಿ ಅವರು ಕಾರ್ಯಕರ್ತರೇ ಎಂದರು.
ಪೊನ್ಮುಡಿಗೆ ಪ್ರಮಾಣ ವಚನ ಬೋಧಿಸಲು ರಾಜ್ಯಪಾಲರ ನಿರಾಕರಣೆ
ನಾವು 28 ಸ್ಥಾನಗಳನ್ನು ಗೆದ್ದು ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡುತ್ತೇವೆ. ಮೊದಲು ದೇಶ. ಅಮೇಲೆ ಪಕ್ಷ ಮತ್ತು ವ್ಯಕ್ತಿ. ನಮ್ಮ ಪಕ್ಷಕ್ಕೆ ಮೊದಲು ದೇಶ ಮುಖ್ಯ. ನಾವು ಯಾವ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಹೋಗಲ್ಲ. ಒಟ್ಟಾಗಿ ನಾವು ಹೋಗುತ್ತೇವೆ, ಒಟ್ಟಿಗೆ ಗೆಲ್ಲುತ್ತೇವೆ. ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.
ಸ್ವತಂತ್ರ ಬಂದಾಗಿನಿಂದಲೂ ಒಂದೇ ಕುಟುಂಬದ ಕೈಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ಇವರಿಗೆ ಯಡಿಯೂರಪ್ಪ, ಅವರ ಮಗನ ಬಗ್ಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಹಕ್ಕಿಲ್ಲ. ನನಗೆ ಪಕ್ಷ ಏನು ಜವಾಬ್ದಾರಿ ಕೊಡುತ್ತದೆಯೋ ಅದನ್ನು ನಿರ್ವಹಿಸುತ್ತೇನೆ. ನಮ್ಮದು ಸಾಮೂಹಿಕ ನೇತೃತ್ವದ ಪಕ್ಷವಾಗಿದ್ದು ಲೋಕಸಭೆ ಟಿಕೆಟ್ ಹಂಚಿಕೆ, ಲೋಕಸಭೆ ಚುನಾವಣಾ ಪ್ರಚಾರ ಎಲ್ಲಾ ಸಾಮೂಹಿಕವಾಗಿಯೆ ನಡೆಯುತ್ತದೆ ಎಂದು ತಮ್ಮ ಪಕ್ಷವನ್ನು ಸಮರ್ಥಿಸಿಕೊಂಡರು.