ಕೆಎಸ್ಆರ್ಟಿಸಿ-ಬಿಎಂಟಿಸಿ ಬಸ್ ಸಂಚಾರ ಯಥಾರೀತಿ
ಬೆಂಗಳೂರು, ಜ.8- ವಿವಿಧ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ನಡೆಸುತ್ತಿರುವ ಮುಷ್ಕರದ ನಡುವೆಯೂ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಇಂದು ಬೆಳಗ್ಗೆಯಿಂದಲೂ ಎಂದಿನಂತೆ ಬಸ್ ಸಂಚಾರ ಎಲ್ಲೆಡೆ ಕಂಡುಬಂದಿತು.
ಕೆಎಸ್ಆರ್ಟಿಸಿಯ ಎಲ್ಲ ವಿಭಾಗ ಹಾಗೂ ಡಿಫೋಗಳ ಬಸ್ಗಳ ದೈನಂದಿನ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯವಾಗಿಲ್ಲ. ಯಥಾರೀತಿ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಅದೇ ರೀತಿ ಬಿಎಂಟಿಸಿ ಬಸ್ಗಳ ಸಂಚಾರದಲ್ಲೂ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮುಷ್ಕರದ ನಡುವೆಯೂ ಎಲ್ಲ ಡಿಫೋಗಳ ಬಸ್ ಸಂಚಾರ ಸಾಮಾನ್ಯವಾಗಿತ್ತು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ಮುಷ್ಕರದಿಂದಾಗಿ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ತೊಂದರೆ ಉಂಟಾಗಿರುವುದು ಕಂಡುಬಂದಿಲ್ಲ. ಆದರೆ, ಇಂದು ಬೆಳಗ್ಗೆ ಮಡಿಕೇರಿ ಪಟ್ಟಣದಲ್ಲಿ ಒಂದು ಬಸ್ಗೆ ಕಲ್ಲು ಹೊಡೆದಿರುವ ಘಟನೆ ವರದಿಯಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.