Tuesday, July 23, 2024
Homeರಾಜ್ಯಮೋಡ ಬಿತ್ತನೆ ಕುರಿತಂತೆ ಚರ್ಚೆ : ಡಿಸಿಎಂ ಡಿಕೆಶಿ

ಮೋಡ ಬಿತ್ತನೆ ಕುರಿತಂತೆ ಚರ್ಚೆ : ಡಿಸಿಎಂ ಡಿಕೆಶಿ

ಬೆಂಗಳೂರು,ಸೆ.25- ಮಳೆ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆತಂಕದ ಪರಿಸ್ಥಿತಿಯನ್ನು ಮನಗಂಡು ಮೋಡ ಬಿತ್ತನೆ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೊರತೆಯಿಂದಾಗಿ ಸಾಕಷ್ಟು ಸಮಸ್ಯೆಗಳಾಗಿವೆ. ಕಾಲ ಮೀರಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮವಾಗಬಹುದು. ಈ ನಿಟ್ಟಿನಲ್ಲಿ ಮೋಡ ಬಿತ್ತನೆ ಬಗ್ಗೆ ಚರ್ಚೆಗಳು ನಡೆದಿವೆ.

ಈಗಾಗಲೇ ಎರಡು-ಮೂರು ಕಡೆ ಸ್ಥಳ ಗುರುತಿಸಲಾಗಿದೆ. ಮೋಡ ಬಿತ್ತನೆಯ ಬಗ್ಗೆ ನಾನಾ ರೀತಿಯ ಅಭಿಪ್ರಾಯಗಳು ಕೂಡ ಕೇಳಿಬಂದಿವೆ. ಸರ್ಕಾರ ಎಲ್ಲವನ್ನೂ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು. ಕಾವೇರಿಯ ನದಿ ವಿವಾದ ತೀವ್ರವಾಗಿದೆ. ನಿನ್ನೆ ಮತ್ತು ಇಂದು ಬೆಂಗಳೂರು ಸುತ್ತಮುತ್ತ ಆಗಿರುವ ಮಳೆಯ ನೀರು ತಮಿಳುನಾಡಿನತ್ತ ಹರಿದುಹೋಗಿದೆ. ಕಾವೇರಿ ನದಿಪಾತ್ರದಲ್ಲಿನ ಜಲಾಶಯಗಳಿಗೆ ಒಳಹರಿವು ಸುಧಾರಣೆಗೊಂಡಿದೆ.

ಬಂದ್‍ಗೆ ಆಕ್ಷೇಪಣೆಯಿಲ್ಲ :
ಕಾವೇರಿ ನದಿ ವಿಷಯದಲ್ಲಿ ಪ್ರತಿಭಟನೆ ನಡೆಸಲು, ಬಂದ್ ಮಾಡಲು ನಮ್ಮ ಆಕ್ಷೇಪಣೆಗಳಿಲ್ಲ. ನಾಡಿನ ಹಿತಾಸಕ್ತಿ ವಿಷಯವಾಗಿ ನಾವು ಎಲ್ಲಾ ರೀತಿಯ ಸಹಕಾರ ಕೊಡುತ್ತೇವೆ. ನೆಲ, ಜಲ, ಭಾಷೆ ವಿಷಯವಾಗಿ ಪಕ್ಷಾತೀತವಾಗಿ ನಾವು ಒಟ್ಟಾಗಬೇಕಿದೆ. ಹೀಗಾಗಿ ನಾವು ಹೋರಾಟಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ಶಾಂತಿ ಕಾಪಾಡಿಕೊಳ್ಳಬೇಕಿದೆ. ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಯಾವುದೇ ಪಕ್ಷವಾದರೂ ಹೋರಾಟ ಮಾಡಲಿ, ನಾವು ಬೇಡ ಎನ್ನುವುದಿಲ್ಲ. ನಮ್ಮ ಪಕ್ಷದಲ್ಲಿ ಕೆಲವರು ಕರೆ ಮಾಡಿ ಹೋರಾಟ ಮಾಡುವುದಾಗಿ ಹೇಳುತ್ತಿದ್ದಾರೆ. ನಾವು ಯಾವುದಕ್ಕೂ ಬೇಡ ಎನ್ನುವುದಿಲ್ಲ. ಆದರೆ ಕಾವೇರಿ ವಿವಾದ ಕುರಿತಂತೆ ಹೈಕೋರ್ಟ್, ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಬಾಕಿ ಇದೆ. ನಮ್ಮ ಹೋರಾಟದಿಂದ ತೀರ್ಪಿಗೆ ತೊಂದರೆಯಾಗಬಾರದು. ಪ್ರಚಾರಕ್ಕಾಗಿ ಹೋರಾಟ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಪಿಯುಸಿ ಪರೀಕ್ಷೆಗಳ ಮೌಲ್ಯಮಾಪಕರ ಸಂಭಾವನೆ ಬಿಡುಗಡೆಗೆ ಆಗ್ರಹ

ಹೋರಾಟಗಳಿಂದ ಕಾನೂನಾತ್ಮಕವಾಗಿ ತೊಂದರೆಯಾಗಲಿದೆಯೇ ಎಂಬ ಬಗ್ಗೆ ನಾನು ಪ್ರತಿಕ್ರಿಯಿಸಲಾಗುವುದಿಲ್ಲ. ಇತ್ತ ಮಂತ್ರಿಯಾಗಿ ಕಾನೂನಿಗೂ ಗೌರವ ಕೊಡಬೇಕು, ಜನರನ್ನೂ ಉಳಿಸಿಕೊಳ್ಳಬೇಕು. ಇದು ನನ್ನ ಮತ್ತು ಸರ್ಕಾರದ ಪರಿಸ್ಥಿತಿಯಾಗಿದೆ. ಏನೇ ಆದರೂ ರಾಜ್ಯದ ಹಿತಾಸಕ್ತಿ ಕಾಪಾಡಿಕೊಳ್ಳಬೇಕಿದೆ ಎಂದರು. ಸರ್ಕಾರ ಜನರ ಜೊತೆಗಿದೆ. ಬಂದ್‍ಗೆ ಜನ ಸಹಕಾರ ಕೊಡದೇ ಇದ್ದರೆ ಮರ್ಯಾದೆ ಹೋಗುತ್ತದೆ. ಸಂಘಟನೆಗಳ ನಡುವೆಯೇ ಹಲವಾರು ಭಿನ್ನಾಭಿಪ್ರಾಯಗಳು ಕಂಡುಬರುತ್ತಿವೆ ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್ ನಿಂದ ಹಲವರ ವಲಸೆ :
ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯ ವಿವಾದಗಳ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಅದರೆ ಜೆಡಿಎಸ್, ಬಿಜೆಪಿಯ ಮೈತ್ರಿಯ ಬಳಿಕ ಜೆಡಿಎಸ್‍ನಲ್ಲಿರುವ ಅಲ್ಪಸಂಖ್ಯಾತರು ಸೇರಿದಂತೆ ಹಲವಾರು ನಾಯಕರು ಅಸಮಾಧಾನಗೊಂಡಿದ್ದಾರೆ. ನಮ್ಮ ಜೊತೆ ಚರ್ಚೆ ಮಾಡುತ್ತಿದ್ದಾರೆ.

ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಬರುವ ಕಾರ್ಯಕರ್ತರನ್ನು ಸ್ಥಳೀಯ ಮಟ್ಟದಲ್ಲಿ ಸೇರಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಚುನಾವಣೆಯಲ್ಲಿ ಸ್ರ್ಪಧಿಸಿ ಸೋತವರು, ಗೆದ್ದವರನ್ನು ಸೇರಿಸಿಕೊಳ್ಳಲು ಉನ್ನತ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ. ಶಾಸಕರನ್ನು ಸೇರ್ಪಡೆ ಮಾಡಿಕೊಳ್ಳುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅಡ್ಡಿಯಾಗುವ ಬಗ್ಗೆಯೂ ನಮಗೆ ಅರಿವಿದೆ. ಮುಖ್ಯಮಂತ್ರಿ ಹಾಗೂ ಸಂಪುಟದ ಸಹದ್ಯೋಗಿಗಳ ಜೊತೆಗೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಮಹಿಳಾ ಮೀಸಲಾತಿ ಲೋಪದ ವಿರುದ್ಧ ಕಾಂಗ್ರೆಸ್‍ನಿಂದ ಸರಣಿ ಪತ್ರಿಕಾಗೋಷ್ಠಿ

ಜನವರಿಗೂ ಮೊದಲೇ ಪಟ್ಟಿ ಬಿಡುಗಡೆ :
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಕ್ರೂಢೀಕರಿಸಿ, ವರದಿ ನೀಡಲು ಸಚಿವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಎಂ.ಬಿ.ಪಾಟೀಲ್ ವಿದೇಶದಲ್ಲಿದ್ದಾರೆ. ಕೆ.ಜೆ.ಜಾರ್ಜ್ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿದ್ದಾರೆ. ಈ ರೀತಿ ತಾಂತ್ರಿಕ ಸಮಸ್ಯೆಯಿರುವ ಎರಡು-ಮೂರು ಮಂದಿ ಸಚಿವರನ್ನು ಹೊರತುಪಡಿಸಿದರೆ ಉಳಿದ ಎಲ್ಲರನ್ನೂ ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಅವರು ಜಿಲ್ಲೆಗಳಿಗೆ ಭೇಟಿ ನೀಡಿ, ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಸಿ ಚುನಾವಣೆಯಲ್ಲಿ ಸ್ರ್ಪಧಿಸಲು ಆಕಾಂಕ್ಷಿಗಳಾಗಿರುವ ಎರಡು-ಮೂರು ಮಂದಿಯ ಹೆಸರುಗಳನ್ನು ಎಂಟು-ಹತ್ತು ದಿನಗಳಲ್ಲಿ ಕೆಪಿಸಿಸಿಗೆ ವರದಿ ನೀಡಲಿದ್ದಾರೆ. ಹತ್ತು ದಿನಗಳೊಳಗಾಗಿ ಇದನ್ನು ಕ್ರೂಢೀಕರಿಸಿ ವಿಧಾನಸಭಾ ಚುನಾವಣಾ ಮಾದರಿಯಲ್ಲೇ ಜನವರಿಗೂ ಮೊದಲೇ ಲೋಕಸಭೆ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಘೋಷಣೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News