Friday, November 22, 2024
Homeರಾಜ್ಯಡಿ.15ರೊಳಗೆ ಕೆಎಸ್‌ಆರ್‌ಟಿಸಿ ಕಾರ್ಗೋ ಸೇವೆ ಆರಂಭ

ಡಿ.15ರೊಳಗೆ ಕೆಎಸ್‌ಆರ್‌ಟಿಸಿ ಕಾರ್ಗೋ ಸೇವೆ ಆರಂಭ

ಬೆಂಗಳೂರು, ನ.29-ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು(ಕೆಎಸ್‍ಆರ್‍ಟಿಸಿ) ಸಾರಿಗೆಯೇತರ ಆದಾಯ ವೃದ್ಧಿಸಿಕೊಳ್ಳಲು ಮುಂದಾಗಿದ್ದು, ಡಿಸೆಂಬರ್ 15ರೊಳಗೆ ಕಾರ್ಗೋ ಸೇವೆ ಆರಂಭಿಸಲಿದೆ.ಪಾರ್ಸೆಲ್‍ಗಳನ್ನು ಒಂದು ನಗರದಿಂದ ಮತ್ತೊಂದು ನಗರಕ್ಕೆ ಸಾಗಾಣಿಕೆ ಮಾಡುವ ಕಾರ್ಗೋ ಸೇವೆಗಾಗಿ 20 ಲಾರಿ ಟ್ರಕ್‍ಗಳನ್ನು ಖರೀದಿಸಿದ್ದು, ಸದ್ಯದಲ್ಲಿ ಅಧಿಕೃತ ಚಾಲನೆ ನೀಡಲಿದೆ.

ಬಸ್ ಸೇವೆಯಲ್ಲಿ ಪ್ರಯಾಣಿಕರ ವಿಶ್ವಾಸಕ್ಕೆ ಪಾತ್ರವಾಗಿರುವ ಕೆಎಸ್‍ಆರ್‍ಟಿಸಿಯು ಪ್ರಥಮ ಬಾರಿಗೆ ಟ್ರಕ್‍ಗಳ ಮೂಲಕ ಪಾರ್ಸೆಲ್ ಸೇವೆಗೆ ಮುಂದಾಗಿದೆ. ಕಾರ್ಗೋ ಪಾರ್ಸೆಲ್ ಸೇವೆಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯಲ್ಲಿ ಕೆಎಸ್‍ಆರ್‍ಟಿಸಿ ಇದೆ.
ಪಾರ್ಸಲ್ ಸಾಗಾಣಿಕೆಗೆ ಕೃಷಿ, ಟೆಕ್ಸ್‍ಟೈಲ್ಸ್,ಅಟೊಮೊಬೈಲ್ ಸೇರಿದಂತೆ ಹಲವು ಕ್ಷೇತ್ರಗಳಿಂದ ಸಾಕಷ್ಟು ಬೇಡಿಕೆ ಇದೆ. ಐದಾರು ಟನ್‍ನಷ್ಟು ಸಾಗಾಟ ಮಾಡುವ ಟ್ರಕ್‍ಗಳಿಗೆ ಬೇಡಿಕೆ ಹೆಚ್ಚಿದೆ.

ರಾಜ್ಯದೆಲ್ಲೆಡೆ ಡಿಪೋ, ನಿಲ್ದಾಣಗಳಿರುವುದರಿಂದ ಕಾರ್ಗೋ ಸೇವೆ ಸುಲಭವಾಗಲಿದೆ.ಸದ್ಯಕ್ಕೆ ಪಾರ್ಸೆಲ್‍ಗಳಿಗೆ ಬೇಡಿಕೆ ಹೆಚ್ಚಿರುವ ಮಾರ್ಗಗಳಲ್ಲಿ ಕಾರ್ಗೋ ಸೇವೆಗೆ ಟ್ರಕ್ ಬಳಕೆ ಮಾಡುವುದಾಗಿ ಕೆಎಸ್‍ಆರ್‍ಟಿಸಿ ತಿಳಿಸಿದೆ. ಆರಂಭಿಕ ಹಂತದಲ್ಲಿ 20 ಟ್ರಕ್‍ಗಳ ಮೂಲಕ ಕಾರ್ಗೋ ಪ್ರಾರಂಭಿಸಲಿದ್ದು, ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾದಂತೆ ಟ್ರಕ್‍ಗಳ ಸಂಖ್ಯೆಯನ್ನೂ ಹೆಚ್ಚಿಸಲು ಉದ್ದೇಶಿಸಲಾಗಿದೆ.

ಸುರಂಗದಲ್ಲಿದ್ದಾಗ ವಾಕ್, ಯೋಗ ಮಾಡುತ್ತಿದ್ದರಂತೆ ಕಾರ್ಮಿಕರು

ಈಗಾಗಲೇ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಲಗೇಜ್(ಪಾರ್ಸಲ್)ಸಾಗಾಣಿಕೆ ಮಾಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಕಾರ್ಯಾರಂಭ ಮಾಡಿದೆ. 109 ಕೇಂದ್ರಗಳಲ್ಲಿ ಸಣ್ಣ ಪ್ರಮಾಣದ ಪಾರ್ಸೆಲ್‍ಗಳನ್ನು ಬಸ್ ಮೂಲಕ ಕೊಂಡೊಯ್ಯುವ ಕಾರ್ಯವನು ಪ್ರಾರಂಭ ಮಾಡಿತ್ತು. ಆನಂತರ ಎಲ್ಲಾ ಬಸ್ ನಿಲ್ದಾಣಗಳಿಗೆ ವಿಸ್ತರಣೆ ಮಾಡಲಾಗಿತ್ತು. ಪಾರ್ಸಲ್ ಸೇವೆಯಿಂದ ವಾರ್ಷಿಕ 4 ಕೋಟಿ ರೂ.ವರೆಗೆ ಆದಾಯವೆದೆ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.

ಕೆಎಸ್‍ಆರ್‍ಟಿಸಿಯು ಕಾರ್ಗೊ ಸೇವೆ ಕೈಗೊಳ್ಳಲು ಖಾಸಗಿ ಏಜೆನ್ಸಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಬರುವ ಆದಾಯದಲ್ಲಿ ಕೆಎಸ್‍ಆರ್‍ಟಿಸಿಗೆ ಶೇ. 80, ಖಾಸಗಿ ಏಜೆನ್ಸಿಗೆ ಶೇ. 20 ರಷ್ಟು ಪಾಲುದಾರಿಕೆ ನಿಗದಿಯಾಗಿತ್ತು. ಇದರಿಂದ ಕೆಎಸ್‍ಆರ್‍ಟಿಸಿ ವಾರ್ಷಿಕ ಸು. 13.20 ಕೋಟಿ ರೂ. ಆದಾಯವಿದೆ.

ಬಸ್‍ಗಳಲ್ಲಿ ಸಾಗಿಸುವ ಪಾರ್ಸೆಲ್‍ಗಳನ್ನು ಸಂಬಂಧಪಟ್ಟವರು ಬಸ್ ನಿಲ್ದಾಣಗಳಿಗೆ ಬಂದು ಕೊಂಡೊಯ್ಯಬೇಕಿತ್ತು. ಆದರೆ, ಕಾರ್ಗೋ ಟ್ರಕ್ ಆರಂಭಗೊಂಡರೆ ನಿಗದಿತ ಸ್ಥಳಕ್ಕೇ ತಲುಪಿಸಲಿದೆ. ಹೀಗಾಗಿ ವ್ಯವಸ್ಥಿತ ಮತ್ತು ಸಮರ್ಪಕವಾದ ಪಾರ್ಸೆಲ್ ಸೇವೆ ಆರಂಭಿಸುವ ಮೂಲಕ ಪ್ರಸ್ತುತ ಗಳಿಸುತ್ತಿರುವ ಆದಾಯವನ್ನು ಹತ್ತು ಪಟ್ಟು ಹೆಚ್ಚಿಸುವ ಉದ್ದೇಶವನ್ನು ಕೆಎಸ್‍ಆರ್‍ಟಿಸಿ ಹೊಂದಿದೆ.

ಪ್ರಸ್ತುತ 800 ಬಸ್‍ಗಳಲ್ಲಿ ಪಾರ್ಸೆಲ್ ಸೇವೆ ಇದ್ದು, ಇನ್ನು ಮುಂದೆ ಖರೀದಿಸಲಾಗುವ ಎಲ್ಲಾ ಬಸ್‍ಗಳಲ್ಲೂ ಪಾರ್ಸೆಲ್ ಕೊಂಡೊಯ್ಯುವ ವ್ಯವಸ್ಥೆ ಇರುತ್ತದೆ. ಈ ಸೇವೆಯನ್ನು ಮುಂದಿನ ನಾಲ್ಕು ವರ್ಷಗಳಲ್ಲಿ 4000 ಬಸ್‍ಗಳಿಗೆ ವಿಸ್ತರಿಸುವ ಉದ್ದೇಶವಿದೆ. ಹೀಗಾಗಿ ಬಸ್ ಮತ್ತು ಟ್ರಕ್ ಎರಡರಲ್ಲೂ ಪಾರ್ಸಲ್ ಸೇವೆ ದೊರೆಯಲಿದೆ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.

RELATED ARTICLES

Latest News