ಕನಕಪುರ,ಮೇ.14- ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ನಗರ ಬಸ್ ಡಿಪ್ಪೋಗೆ ತಂದೊಪ್ಪಿಸಿ ಮಾನವೀಯತೆ ಮೆರೆದ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರ ಪ್ರಶಂಸೆಗೆ ಒಳಗಾಗಿದ್ದಾರೆ.
ಮಂಗಳವಾರ ಸಾರಿಗೆ ಮಾರ್ಗ ಸಂಖ್ಯೆ 54 ಬೆಂಗಳೂರು-ಕೊಳ್ಳೇಗಾಲ ತೆರಳುತ್ತಿದ್ದ ಬಸ್‌ನಲ್ಲಿ ಮೈಸೂರು ಜಿಲ್ಲೆ, ಟಿ.ನರಸಿಪುರ ತಾಲೂಕು, ಮಾದಾಪುರ ಗ್ರಾಮದ ಚಿನ್ನಮ್ಮ ಎಂಬುವರು ಪ್ರಯಾಣಿಸುವ ವೇಳೆ ಸುಮಾರು 75 ಗ್ರಾಂ ತೂಕದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಬ್ಯಾಗನ್ನು ಬಸ್‌ನಲ್ಲಿಯೇ ಬಿಟ್ಟು ತೆರಳಿದ್ದರು.
ಇದನ್ನು ಗಮನಿಸಿದ ಬಸ್ ಚಾಲಕ ದಾಸಪ್ಪ ಹಾಗೂ ನಿರ್ವಾಹಕ ಡಿ.ಶಿವಕುಮಾರ್ ಬ್ಯಾಗನ್ನು ಬಸ್ ಘಟಕ ವ್ಯವಸ್ಥಾಪಕ ಡಿ.ಎಂ.ನರಸಿಂಹರಾಜು ಹಾಗೂ ಅಲ್ಲಿನ ಅಧಿಕಾರಿಗಳಿಗೆ ಒಪ್ಪಿಸಿದ್ದರು.
ನಂತರ ಬಸ್‌ನಲ್ಲಿ ಪ್ರಾಯಾಣಿಸುತ್ತಿದ್ದ ಒಡವೆ ಮಾಲೀಕರಾದ ಚಿನ್ನಮ್ಮ ಕುಟುಂಬದ ಸದಸ್ಯರು ಘಟಕಕ್ಕೆ ಭೇಟಿ ನೀಡಿ ವಿಚಾರಿಸಿದಾಗ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿದ ಅಧಿಕಾರಿಗಳು ಅವರ ಚಿನ್ನಾಭರಣಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು.
ಕನಕಪುರ ಘಟಕ ವಿಭಾಗದ ವ್ಯವಸ್ಥಾಪಕ ನರಸಿಂಹರಾಜು, ಸಹಾಯಕ ಸಂಚಾರ ನಿಯಂತ್ರಕಿ ಶೋಭ ಹಾಗೂ ಬಸ್ಸಿನ ಚಾಲಕ ದಾಸಪ್ಪ, ನಿರ್ವಾಹಕ ಶಿವಕುಮಾರ್, ಶಿವರುದ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.