Saturday, November 23, 2024
Homeರಾಜ್ಯಬಸ್‌‍ ಸೋರದಿದ್ದರೂ ಕೊಡೆ ಹಿಡಿದು ವಿಡಿಯೋ ಮಾಡಿದ್ದ ಚಾಲಕ-ನಿರ್ವಾಹಕಿ ಅಮಾನತು

ಬಸ್‌‍ ಸೋರದಿದ್ದರೂ ಕೊಡೆ ಹಿಡಿದು ವಿಡಿಯೋ ಮಾಡಿದ್ದ ಚಾಲಕ-ನಿರ್ವಾಹಕಿ ಅಮಾನತು

ಹುಬ್ಬಳ್ಳಿ, ಮೇ 25- ಮೋಜಿಗಾಗಿ ಮಾಡಿದ ವಿಡಿಯೋ ಚಾಲಕ ಹಾಗೂ ನಿರ್ವಾಹಕರ ಸೇವೆಗೆ ಕುತ್ತು ತಂದೊಡ್ಡಿದೆ. ಬಸ್‌‍ ಮೇಲ್ಛಾವಣಿ ಸೋರದಿದ್ದರೂ ಕೊಡೆ ಹಿಡಿದು ಬಸ್‌‍ ಚಾಲನೆ ಮಾಡಿದ ವಾಯವ್ಯ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ಅದನ್ನು ಚಿತ್ರೀಕರಣ ಮಾಡಿದ ನಿರ್ವಾಹಕಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಗ್‌ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಚಾಲಕ ಹನುಮಂತ ಕಿಲ್ಲೇದಾರ ಹಾಗೂ ನಿರ್ವಾಹಕಿ ಎಚ್‌.ಅನಿತಾ ಅವರನ್ನು ಅಮಾನತು ಮಾಡಲಾಗಿದೆ. ಮೇ 23ರಂದು ಉಪ್ಪಿನಬೆಟಗೇರಿ-ಧಾರವಾಡ ಮಾರ್ಗದಲ್ಲಿ ಬಸ್‌‍ ಹೋಗುತ್ತಿರುವಾಗ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಬಸ್‌‍ನ ವಾಸ್ತವತೆ ಕುರಿತು ಸ್ಥಳೀಯ ತಾಂತ್ರಿಕ ಅಧಿಕಾರಿ ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿಗಳ ಜೊತೆಗೆ ವರದಿ ನೀಡಿದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ವಾಹನ ತಪಾಸಣೆ ಮಾಡಿ, ಚಾಲಕ ಕುಳಿತುಕೊಳ್ಳುವ ಸ್ಥಳ ಅಥವಾ ಇತರೆ ಯಾವುದೇ ಭಾಗದಲ್ಲಿ ಮಳೆಯಿಂದ ಬಸ್‌‍ ಮೇಲ್ಛಾವಣಿ ಸೋರುತ್ತಿರಲಿಲ್ಲ ಎನ್ನುವ ಪರಿಶೀಲನಾ ವರದಿ ಸಲ್ಲಿಸಿದ್ದರು.

ಬಸ್‌‍ನಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಮನರಂಜನೆಗಾಗಿ ವಿಡಿಯೋ ಮಾಡಿದ್ದಾರೆ. ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರ ಯಾವುದೇ ದೂರು ದಾಖಲು ಮಾಡಿಲ್ಲ. ಇನ್ನೂ ಈ ವಿಡಿಯೋ ಕುರಿತು ಚಾಲನಾ ಸಿಬ್ಬಂದಿಯಿಂದ ಸ್ಪಷ್ಟೀಕರಣ ಪಡೆದಾಗ ತಾವು ಮನರಂಜನೆಗಾಗಿ ಚಿತ್ರೀಕರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ವರದಿ ಆಧಾರದ ಮೇಲೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಿಬ್ಬಂದಿಯ ಕರ್ತವ್ಯ ಲೋಪ ಹಾಗೂ ಸಂಸ್ಥೆ ಘನತೆಗೆ ಧಕ್ಕೆಯಾಗುವಂತಹ ಕೆಲಸವಾಗಿದ್ದರಿಂದ ಚಾಲಕ-ನಿರ್ವಾಹಕಿಯನ್ನು ಅಮಾನತು ಮಾಡಿ ಆದೇಶ ಎಂಡಿ ಹೊರಡಿಸಿದ್ದಾರೆ.

RELATED ARTICLES

Latest News