ಬೆಂಗಳೂರು,ಸೆ.6- ಬಯಲುಸೀಮೆ ಜನತೆಯ ನೀರಿನ ದಾಹ ನೀಗಿಸುವ ಉದ್ದೇಶದಿಂದ ನಿರ್ಮಿಸಿರುವ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಗೆ ಗೌರಿ ಹಬ್ಬದ ದಿನವಾದ ಇಂದು ಚಾಲನೆ ನೀಡಲಾಯಿತು. ಸಿಎಂ ಸಿದ್ದರಾಮಯ್ಯ, ಜಲಸಂಪನೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎನ್.ರಾಜಣ್ಣ, ಪರಮೇಶ್ವರ್, ಎಂ.ಬಿ.ಪಾಟೀಲ್, ಸಂಸದ ಶ್ರೇಯಸ್ ಪಟೇಲ್, ಶಾಸಕರು ಮತ್ತಿತರರು ಈ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾದರು.
ವಿತರಣಾ ತೊಟ್ಟಿ 4ರ ದೊಡ್ಡನಾಗರ ಬಳಿ ಮೊದಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರು ಗುಂಡಿ ಒತ್ತುವ ಮೂಲಕ ಯೋಜನೆಗೆ ಚಾಲನೆ ಕೊಟ್ಟರು. ನಂತರ ವಿತರಣಾ ತೊಟ್ಟಿ 3ರ ಬಳಿಯ ಹೆಬ್ಬನಹಳ್ಳಿ ಬಳಿ ಬೃಹತ್ ಬಹಿರಂಗ ಸಭೆ ನಡೆಸಲಾಯಿತು.
ಈ ಯೋಜನೆಯಿಂದ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿ ಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹದ ನೀರನ್ನು 7 ಜಿಲ್ಲೆಗಳಿಗೆ ನೀರು ಹರಿಸಲಾಗುತ್ತದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕುಗಳ 38 ಪಟ್ಟಣ ಪ್ರದೇಶಗಳ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ಕುಡಿಯುವ ನೀರನ್ನು ಒದಗಿಸುವುದು ಹಾಗೂ 5 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರು ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 9.953 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ.50ರಷ್ಟು ತುಂಬಿಸಿ ಅಂರ್ತಜಲ ಮರುಪೂರಣ ಮಾಡುವ ಮಹತ್ವದ ಯೋಜನೆ ಇದಾಗಿದೆ.
ಈ ಯೋಜನೆಯ ಮೊದಲ ಹಂತದಲ್ಲಿ 8 ವಿಯರ್ಗಳ ಮೂಲಕ ನೀರನ್ನು ಮೇಲೆತ್ತಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಮೂರನೇ ಸಂಖ್ಯೆಯ ವಿಯರ್ ಇನ್ನೂ ಸಿದ್ದವಾಗದ ಕಾರಣ ಉಳಿದ 7 ವಿಯರ್ಗಳೂ ಸಿದ್ದವಾಗಿವೆ. ಮೊದಲ ಹಂತದಲ್ಲಿ 1500 ಕ್ಯೂಸೆಕ್ ನೀರನ್ನು ಲಿಫ್‌್ಟ ಮಾಡಲಾಗುತ್ತದೆ. ತದನಂತರ 48 ಕಿಲೋಮೀಟರ್ ತೆರೆದ ಕಾಲುವೆಯಿಂದ ವೇದ ವ್ಯಾಲಿಯಿಂದ ವಾಣಿ ವಿಲಾಸ ಅಣೆಕಟ್ಟೆಗೆ ನೀರು ಹರಿಸಲಾಗುತ್ತದೆ.
ಏನಿದು ಈ ಯೋಜನೆ?:
ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಯೋಲಜನೆ ಇದಾಗಿದೆ. ಹಾಸನದ ಸಕಲೇಶಪುರ ತಾಲೂಕಿನ ಪಶ್ವಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಕಾಡುಮನೆ ಹೊಳೆ, ಎತ್ತಿನ ಹೊಳೆ, ಕೇರಿ ಹೊಳೆ ಮತ್ತು ಹೊಂಗದಹಳ್ಳದಿಂದ ನೀರು ತರುವ ಯೋಜನೆಯಾಗಿದೆ. ಮುಂಗಾರು ಮಳೆಯ ಸಂದರ್ಭದಲ್ಲಿ ಅಂದರೆ 139 ದಿನಗಳಲ್ಲಿ 24.01 ಟಿಎಂಸಿ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸಲಾಗುತ್ತದೆ.
ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ತರುವುದಾಗಿದೆ.ಹಾಸನ, ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಹರಿಯೋ ಎತ್ತಿನಹೊಳೆ ಪಶ್ಚಿಮಘಟ್ಟದಿಂದ ಪಶ್ಚಿಮ ದಿಕ್ಕಿನೆಡೆಗೆ ಅಂದರೆ ಸಮುದ್ರದ ಕಡೆಗೆ ಹರಿಯುತ್ತದೆ. ಹೀಗೆ ಸಮುದ್ರ ಸೇರಿ ಸುಮಾರು 24 ಟಿಎಂಸಿ ನೀರನ್ನು ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು, ರಾಮನಗರ ಹಾಗೂ ಹಾಸನ ಮತ್ತು ಚಿಕ್ಕಮಗಳೂರು ಸೇರಿ ಒಟ್ಟು ಏಳು ಜಿಲ್ಲೆಗಳತ್ತ ಅಂದ್ರೆ ಪೂರ್ವಾಭಿಮುಖವಾಗಿ ನದಿಯ ನೀರನ್ನೇ ತಿರುಗಿಸುವ ಮಹತ್ವದ ಯೋಜನೆ ಇದಾಗಿದೆ.
ಎತ್ತಿನಹೊಳೆ ರಾಜ್ಯದ ಬೃಹತ್ ಯೋಜನೆ:
ಇತ್ತೀಚಿನ ವರ್ಷಗಳಲ್ಲಿ ನಮ ರಾಜ್ಯದಲ್ಲಿ ನಡೆಯುತ್ತಿರುವ ಅತಿದೊಡ್ಡ ನಿರಾವರಿ ಯೋಜನೆ ಈ ಎತ್ತಿನಹೊಳೆ ಯೋಜನೆ. ಒಟ್ಟು 24 ಟಿಎಂಸಿ ನೀರನ್ನು ಮೇಲೆತ್ತಿ ಹರಿಸುವ ಈ ಯೋಜನೆಯಲ್ಲಿ 14 ಟಿಎಂಸಿ ಕುಡಿಯೋ ನಿರಿಗಾಗಿಯೂ 10 ಟಿಎಂಸಿ ನೀರನ್ನ ಉದ್ದೇಶಿತ ಏಳು ಜಿಲ್ಲೆಗಳ ಸುಮಾರು 527 ಕರೆಗಳನ್ನ ತುಂಬಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಗಾಗಿ ಒಟ್ಟು ನಾಲ್ಕು ಭಾಗಗಳಾಗಿ ವಿಭಾಗ ಮಾಡಲಾಗಿದೆ. ನೀರೆತ್ತೋ ತೊಟ್ಟಿಗಳು, ಗುರುತ್ವ ಕಾಲುವೆ, ಸಮತೋಲನ ಜಲಾಶಯ ಮತ್ತು ಪೈಪ್ ಲೈನ್?ಗಳಾಗಿ ನಾಲ್ಕು ಭಾಗಮಾಡಿ ಯೋಜನೆ ಜಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಒಟ್ಟು ಎಂಟು ಜಲ ಮೂಲಗಳಿಂದ ನೀರು ಹರಿಸಲು ಎಂಟು ಪೈಪ್ ಲೈನ್ ಮಾಡಲಾಗಿದೆ.
9 ಪಂಪ್ ಹೌಸ್, 8 ಸಬ್ಸ್ಟೇಷನ್ ಮೂಲಕ ಈ ಯೋಜನೆಯ ನೀರು ಹರಿಯುತ್ತದೆ. ಒಟ್ಟು 261 ಕಿ.ಮೀ ಈ ಯೋಜನೆಯಲ್ಲಿ ನೀರು ಹರಿಯೋ ಕಾಲುವೆಯ ಉದ್ದವಾಗಿದ್ದು ಈಗಾಗಲೇ ಮೂಲದಿಂದ ಸುಮಾರು 42 ಕಿ.ಮೀ ಅಂದರೆ ಬೇಲೂರಿನ ಐದಳ್ಳ ಕಾವಲುವೆರೆಗೂ ನೀರು ಸರಾಗವಾಗಿ ಹರಿಯಲು ಬೇಕಾದ ಕಾಮಗಾರಿ ಮುಗಿದಿದೆ. ಆದರೆ ಐದಳ್ಳ ಕಾವಲು ಬಳಿ 5 ಕಿ.ಮೀ ಅರಣ್ಯ ಭೂಮಿಯಲ್ಲಿ ಕಾಲುವೆ ಹೋಗಬೇಕಿರುವುದರಿಂದ ಅಲ್ಲಿ ಕಾಮಗಾರಿ ಆಗದೇ 32ನೇ ಕಿ.ಮೀನಲ್ಲಿ ನೀರನ್ನು ಬೇರೆಡೆ ತಿರುಗಿಸಿ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರದತ್ತ ಹರಿಸಲಾಗುತ್ತಿದೆ.
ಎತ್ತಿನಹೊಳೆಯ ಈ ಯೋಜನೆಗಾಗಿ ಸಕಲೇಶಪುರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಎಂಟು ಪೈಪ್ಲೈನ್ಗಳ ಮೂಲಕ ನೀರು ಹರಿಯಲಿದ್ದು ಮೊದಲ ಪೈಪ್ಲೈನ್ನಲ್ಲಿ 6.6 ಟಿಎಂಸಿ ನೀರು ಸಿಗಲಿದೆ, ಎರಡನೇ ಪೈಪ್ ನಲ್ಲಿ 1.0 ಟಿಎಂಸಿ, ಮೂರನೇ ಪೈಪ್ ಲೈನ್ ನಲ್ಲಿ 1.4 ಟಿಎಂಸಿ, ನಾಲ್ಕನೆಯದ್ದರಲ್ಲಿ 0.98 ಟಿಎಂಸಿ, 5ನೇ ಪೈಪ್ಲೈನ್ನಲ್ಲಿ 1.73 ಟಿಎಂಸಿ, ಆರನೇ ಪೈಪ್ ಲೈನ್ ನಲ್ಲಿ 2.01 ಟಿಎಂಸಿ, ಎಳನೇ ಪೈಪ್ಲೈನ್ನಲ್ಲಿ 7.76 ಟಿಎಂಸಿ, ಎಂಟನೇಯದರಲ್ಲಿ 2.51 ಟಿಎಂಸಿ ಸೇರಿ ಒಟ್ಟು 24 ಟಿಎಂಸಿ ನೀರು ಸಿಗಲಿದ್ದು, ಈ ನೀರನ್ನು ಬಯಲುಸೀಮೆಗೆ ಹರಿಸುವುದು ಈ ಯೋಜನೆಯ ಬಹುಮುಖ್ಯ ಉದ್ದೇಶವಾಗಿದೆ.
ಲೋಕಾರ್ಪಣೆ ಸಂಭ್ರಮ :
ಎತ್ತಿನಹೊಳೆ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿತ್ತು. ಗೌರಿ ಹಬ್ಬದ ದಿನದಂದು ನಡೆದ ಉದ್ಘಾಟನ ಕಾರ್ಯಕ್ರಮಕ್ಕೂ ಮುನ್ನ ವಿಶೇಷ ಗಂಗಾಪೂಜೆ, ಯಜ್ಞ , ಹೋಮಗಳನ್ನು ನಡೆಸಲಾಯಿತು. ಬಹು ನಿರೀಕ್ಷಿತ ಸಮಗ್ರ ಕುಡಿಯುವ ನೀರಿನ ಎತ್ತಿನ ಹೊಳೆ ಯೋಜನೆಯ ಮೊದಲ ಹಂತಕ್ಕೆ ಸಕಲೇಶಪುರ ತಾಲೂಕಿನ ಬೈಕೆರೆ ದೊಡ್ಡನಗರ ಪಂಪ್ ಹೌಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಜಲಸಂಪನೂಲ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿಯವರ ಜೊತೆ ಜಂಟಿಯಾಗಿ ಆರತಿ ಬೆಳಗುವ ಮೂಲಕ ಗಮನ ಸೆಳೆದರು. ಬಳಿಕ ದೊಡ್ಡ ಸಾಗರದ ಗ್ರಾಮದ ವಿತರಣಾ ತೊಟ್ಟಿಯ 3 ರಲ್ಲಿ ಟೇಪ್ ಕತ್ತರಿಸಿ ಉದ್ಘಾಟಿಸಿದರು. ಯೋಜನೆಯನ್ನು ಪರಿಶೀಲಿಸುವ ವೇಳೆ ನೀರಿನ ಹರಿವು ಹಾಗೂ ಇತರ ಮಾಹಿತಿಗಳ ಕುರಿತು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯವರಿಗೆ ಸುದೀರ್ಘ ವಿವರಣೆ ನೀಡಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್ ಕೆ.ಜೆ. ಜಾರ್ಜ್, ಕೆ.ಎನ್. ರಾಜಣ್ಣ , ಎನ್.ಎಸ್. ಬೋಸ್ರಾಜ, ಕೆ.ಎಚ್. ಮುನಿಯಪ್ಪ ಹಾಗೂ 5 ತಾಲೂಕುಗಳ ಶಾಸಕರು, ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ 7 ಕಡೆ ಏತ ನೀರಾವರಿ ಯೋಜನೆಗಳಿಗೆ ಸಚಿವರುಗಳು ಚಾಲನೆ ನೀಡಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಂಗಳೂರು ಜಿಲ್ಲೆಗಳ 29 ತಾಲೂಕುಗಳಿಗೆ ಕುಡಿಯುವ ನೀರು ಹಾಗು ಅಂತರ್ಜಲ ಅಭಿವೃದ್ಧಿಗೆ ಎತ್ತಿನಹೊಳೆ ಯೋಜನೆಗೆ ನೀರನ್ನು ಬಳಕೆ ಮಾಡಲಾಗುತ್ತಿದೆ.
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಸಂಪುಟ ಸಚಿವರು ಪಾಲ್ಗೊಂಡಿದ್ದರು.