ಮೈಸೂರು,ನ.24- ಪ್ರಸ್ತುತ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾಗಿದ್ದು, ಮುಂದಿನ ಮೂರು ವರ್ಷ ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ. ಅನಂತರ ಕ್ಷೇತ್ರದ ಜನ ಹೇಳುವ ಪಕ್ಷಕ್ಕೆ ಸೇರಲು ಸಿದ್ಧನಿದ್ದೇನೆ ಎಂದು ಹಿರಿಯ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನ ಕೋರ್‌ಕಮಿಟಿ ಅಧ್ಯಕ್ಷ ಸ್ಥಾನವನ್ನು ಕೇಳಿರಲಿಲ್ಲ. ಸಿ.ಎಂ.ಇಬ್ರಾಹಿಂ ಘೋಷಣೆ ಮಾಡಿದ್ದರು. ವಿಧಾನಸಭೆಯ ವಿರೋಧಪಕ್ಷದ ಉಪನಾಯಕನನ್ನಾಗಿ ಮಾಡಿ ಪಕ್ಕದಲ್ಲಿ ಕೂರಿಸಿಕೊಳ್ಳಲಿಲ್ಲ. ಶಿವಮೊಗ್ಗದ ಮಹಿಳಾ ಶಾಸಕಿಯನ್ನಾಗಿ ಮಾಡಿದರು.
ಕುಮಾರಸ್ವಾಮಿ ಸಂಸದರಾದ ಬಳಿಕ ತೆರವಾದ ವಿರೋಧಪಕ್ಷದ ಸ್ಥಾನಕ್ಕೆ ಜಿ.ಟಿ.ದೇವೇಗೌಡರನ್ನು ನೇಮಿಸುವುದಾಗಿ ಜೆಡಿಎಸ್-ಬಿಜೆಪಿ ನಾಯಕರ ನಡುವೆ ಘೋಷಣೆ ಮಾಡಿದ್ದರು. ಆದರೆ ಅದರಂತೆ ನಡೆದುಕೊಳ್ಳಲಿಲ್ಲ ಎಂದರು.
ವಿರೋಧಪಕ್ಷದ ನಾಯಕನನ್ನಾಗಿ ಮಾಡಿ ಎಂದು ನಾನು ಶಾಸಕನಲ್ಲದ ಸಾ.ರಾ.ಮಹೇಶ್‌ನನ್ನು ಕೇಳಬೇಕಿತ್ತಂತೆ. ಸಾ.ರಾ.ಮಹೇಶ್ ಮೈಸೂರಿನಲ್ಲಿ ಪಕ್ಷದ ಸಭೆ ಮಾಡಿ ಇನ್ನು ಮುಂದೆ ಬಿ ಫಾರಂ ಕೊಡುವುದು ನಾನು. ದೇವೇಗೌಡರು, ಕುಮಾರಸ್ವಾಮಿ ಅಲ್ಲ ಎಂದು ಹೇಳಿದ್ದಾರೆ. ನಾನು ಆತನ ಕೈಯಿಂದ ಬಿ ಫಾರಂ ಪಡೆದುಕೊಳ್ಳಬೇಕೇ? ಎಂದು ಪ್ರಶ್ನಿಸಿದರು.
ಎಚ್.ಡಿ.ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ಧ್ವಂಸ ಮಾಡಿದ್ದಾರೆ. ದೇವೇಗೌಡರು ಯಾವಾಗ ಮೈಸೂರಿಗೆ ಬಂದರೂ ನನಗೆ ಕರೆ ಮಾಡುತ್ತಿದ್ದರು. ಮುನಿಸಿಕೊಂಡಿದ್ದಾಗಲೂ ನನ್ನ ಜೊತೆ ಮಾತನಾಡಿಯೇ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಅವರು ಮೈಸೂರಿಗೆ ಮದುವೆಗೆ ಬಂದಿದ್ದಾರೆ. ನನ್ನ ಜೊತೆ ಮಾತನಾಡಿಲ್ಲ. ಅದು ಏಕೆ ಎಂದು ಗೊತ್ತಿಲ್ಲ ಎಂದರು.
ಈ ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಜೆಡಿಎಸ್‌ನಿಂದ ಹೊರಹೋದರು. ಆ ಸ್ಥಾನಕ್ಕೆ ಜಿ.ಟಿ.ದೇವೇಗೌಡರನ್ನು ನಿಯೋಜಿಸುವುದಾಗಿ ಬಹಿರಂಗವಾಗಿ ಹೇಳಿದರು, ಮಾಡಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಮಾನಾಂತರ ಹುದ್ದೆ ನೀಡುವುದಾಗಿ ಹೇಳಿದ್ದರು.
ಸಚಿವ ಸ್ಥಾನವನ್ನೂ ನೀಡದೇ ಸತಾಯಿಸಿದ್ದರು. ಕೊನೆಗೆ ವಿಫಲವಾಗಲಿ ಎಂಬ ಕಾರಣಕ್ಕೆ ಉನ್ನತ ಶಿಕ್ಷಣ ಖಾತೆ ನೀಡಿದ್ದರು. ಯಾವುದೇ ಲೋಪವಿಲ್ಲದೆ ನಾನು ಕೆಲಸ ಮಾಡಿದ್ದೆ. ಈಗಲೂ ಅದರಲ್ಲಿ ಒಂದು ತಪ್ಪನ್ನು ಹುಡುಕಲು ಸಾಧ್ಯವಿಲ್ಲ. ಇದೆಲ್ಲಾ ದೇವರ ಕೃಪೆ ಎಂದರು. ವಚನ ಭ್ರಷ್ಟತನದ ಆರೋಪ ಕೇಳಿಬಂದಾಗ ತಾವು ಬಿಜೆಪಿ ಸೇರಿದ್ದು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಗುರಿಯನ್ನು ಸಾಧಿಸಿದ್ದೆ. ಎರಡು ಬಾರಿ ಜೆಡಿಎಸ್‌ನಲ್ಲಿ ಕೆಲಸ ಮಾಡಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಕ್ಷೇತ್ರದ ಜನ ಜೆಡಿಎಸ್‌ನಲ್ಲೇ ಮುಂದುವರೆಯಿರಿ ಎಂದರೆ ಉಳಿಯುತ್ತೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು, ನಿವೃತ್ತಿ ತೆಗೆದುಕೊಳ್ಳುವುದು, ಕಾಂಗ್ರೆಸ್‌ಗೆ ಹೋಗುವುದು, ಬಿಜೆಪಿ ಸೇರುವುದು ಸೇರಿದಂತೆ ಯಾವುದೇ ವಿಚಾರಗಳಾದರೂ ಜನ ತೀರ್ಮಾನ ಮಾಡಬೇಕು. ಸದ್ಯಕ್ಕೆ ನಾನು ಪಕ್ಷ ಬದಲಾವಣೆ ಮಾಡುವುದಿಲ್ಲ. ಅಂತಹ ಸಂದರ್ಭವೂ ಇಲ್ಲ ಎಂದು ಹೇಳಿದರು.