Monday, May 20, 2024
Homeರಾಜ್ಯ"ಪ್ರಜ್ವಲ್‌ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದ ರಾಹುಲ್‌ ಗಾಂಧಿ ಅವರನ್ನು ಏಕೆ ವಿಚಾರಣೆಗೆ ಕರೆದಿಲ್ಲ..?"

“ಪ್ರಜ್ವಲ್‌ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದ ರಾಹುಲ್‌ ಗಾಂಧಿ ಅವರನ್ನು ಏಕೆ ವಿಚಾರಣೆಗೆ ಕರೆದಿಲ್ಲ..?”

ಬೆಂಗಳೂರು,ಮೇ7- ಸಂಸದ ಪ್ರಜ್ವಲ್‌ ರೇವಣ್ಣ ಅವರು 16 ವರ್ಷದೊಳಗಿನ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಆರೋಪ ಮಾಡಿದ್ದರು ಎಸ್‌ಐಟಿ ಅವರನ್ನು ಏಕೆ ವಿಚಾರಣೆಗೆ ಕರೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪವನ್ನು ಸಹ ಮಾಡಿದ್ದಾರೆ. ಈ ಆರೋಪ ಮಾಡಿದ ರಾಹುಲ್‌ ಗಾಂಧಿ ಅವರನ್ನು ಏಕೆ ವಿಚಾರಣೆಗೆ ಕರೆದಿಲ್ಲ. ನೇರ ಆರೋಪ ಮಾಡಿದ ಅವರ ವಿರುದ್ಧ ಏಕೆ ದೂರು ಸ್ವೀಕರಿಸಲಿಲ್ಲ ಎಂದು ಪ್ರಶ್ನಿಸಿದರು.

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ್ದರೆ ಪೋಕ್ಸೋ ಕಾಯ್ದೆ ದಾಖಲಾಗಬೇಕಲ್ಲವೇ? ಇಷ್ಟೆಲ್ಲ ಮಾಹಿತಿ ಅವರಿಗೆ ಹೇಗೆ ಬಂತು? ಇದು ಕಾಂಗ್ರೆಸ್‌ನವರು ಮಾಡಿರುವ ವ್ಯವಸ್ಥಿತ ಸಂಚು. ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರನ್ನು ಏಕೆ ಎಳೆದು ತರುತ್ತೀರಿ. ಗ್ಯಾರಂಟಿಯಿಂದ ಮತ ಗಳಿಸಲು ಸಾಧ್ಯವಾಗುವುದಿಲ್ಲ ಎಂಬ ಅನುಮಾನವೇ? ಎಂದು ಪ್ರಶ್ನಿಸಿದರು.

ಪ್ರಚಾರಕ್ಕಾಗಿ, ಮತ ಗಳಿಕೆಯ ಲಾಭಕ್ಕಾಗಿ ಹೆಣ್ಣುಮಕ್ಕಳ ಮಾನವನ್ನು ಹರಾಜು ಮಾಡಿದ್ದಾರೆ. ಪ್ರಧಾನಿಯವರು ಪ್ರಜ್ವಲ್‌ ರೇವಣ್ಣ ಅವರ ಬಗ್ಗೆ ಮೃದು ಧೋರಣೆ ಇಲ್ಲ ಎಂದು ಹೇಳಿದ್ದಾರೆ. ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂಬುದನ್ನು ಮತ್ತೆ ಪುನರುಚ್ಚರಿಸುತ್ತೇನೆ ಎಂದರು.

ಹಾಸನದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಹೇಳಿದ್ದಾರೆ. ಯಾರು ಮೊದಲು ದೂರು ಕೊಡಬೇಕು, ನಂತರ ಯಾರು ಕೊಡಬೇಕು ಎಂದು ಟಿಕ್‌ ಮಾಡಿದ್ದು ನೀವೇ ಅಲ್ಲವೇ ಎಂದು ವಾಗ್ದಾಳಿ ನಡೆಸಿದರು. ಈ ಪ್ರಕರಣವನ್ನು ಮುಚ್ಚಿ ಹಾಕಲು ಬಿಡುವುದಿಲ್ಲ. ಪಾರದರ್ಶಕ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

RELATED ARTICLES

Latest News