Saturday, July 27, 2024
Homeರಾಜಕೀಯಸರ್ಕಾರದಲ್ಲಿರುವ ದೊಡ್ಡ ತಿಮಿಂಗಲ ಯಾವುದು ಎಂದು ಕುಮಾರಸ್ವಾಮಿಯವರು ಹೇಳಬೇಕು : ಪರಮೇಶ್ವರ್‌

ಸರ್ಕಾರದಲ್ಲಿರುವ ದೊಡ್ಡ ತಿಮಿಂಗಲ ಯಾವುದು ಎಂದು ಕುಮಾರಸ್ವಾಮಿಯವರು ಹೇಳಬೇಕು : ಪರಮೇಶ್ವರ್‌

ಬೆಂಗಳೂರು,ಮೇ 15- ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸರ್ಕಾರದಲ್ಲಿರುವ ದೊಡ್ಡ ತಿಮಿಂಗಲ ಯಾವುದು ಎಂದು ಹೆಸರು ಹೇಳಬೇಕು. ಅವರಿಗೆ ತಿಮಿಂಗಲ ಯಾರು ಎಂದು ಗೊತ್ತಿರಬೇಕು. ಹಾಗಾಗಿಯೇ ಹೇಳಿಕೆ ನೀಡಿದ್ದಾರೆ. ಗೊತ್ತಿದ್ದೂ ಹೇಳದೇ ಇರುವುದು ದೊಡ್ಡ ತಪ್ಪು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಪೆನ್‌ಡ್ರೈವ್‌ ಇದೆ ಎಂದು ಕುಮಾರಸ್ವಾಮಿ ಮೊದಲಿನಿಂದಲೂ ಹೇಳುತ್ತಲೇ ಇದ್ದಾರೆ. ಇದನ್ನೇ ಬಳಕೆ ಮಾಡಿಕೊಂಡು ದಿನಕ್ಕೊಂದು ಹೇಳಿಕೆ ನೀಡುತ್ತಾರೆ. ಮೊದಲು ಪೆನ್‌ಡ್ರೈವ್‌ ಅನ್ನು ಕೊಡಲಿ. ಅನಂತರ ತನಿಖೆ ಮಾಡಿಸದೇ ಇದ್ದರೆ ಪ್ರಶ್ನೆ ಮಾಡಲಿ ಎಂದರು.


ಪ್ರಜ್ವಲ್‌ ರೇವಣ್ಣ ವಿದೇಶದಿಂದ ಆಗಮಿಸುವ ಬಗ್ಗೆ ಎಸ್‌‍ಐಟಿ ಗಮನಿಸುತ್ತದೆ. ಜರ್ಮನಿಯಿಂದ ಪ್ರಜ್ವಲ್‌ ರೇವಣ್ಣ ವಾಪಸ್‌‍ ಬರುವ ಬಗ್ಗೆ ಟಿಕೆಟ್‌ ಬುಕ್‌ ಮಾಡಿರುವ ಕುರಿತು ಯಾರಿಗೆ ಮಾಹಿತಿ ಇದೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.ಕೆಲವೊಮೆ ಗುಪ್ತಚರ ಇಲಾಖೆಗಿಂತಲೂ ವೇಗವಾಗಿ ಬೇರೆಯವರಿಗೆ ಮಾಹಿತಿ ಸಿಕ್ಕಿರುತ್ತದೆ. ಅಂತಹ ಮಾಹಿತಿಗಳಿದ್ದರೆ ನಮಗೆ ತಲುಪಿಸಿ, ತನಿಖೆಗೆ ಸಹಾಯವಾಗುತ್ತದೆ. ಪ್ರಜ್ವಲ್‌ ರೇವಣ್ಣ ಅವರ ಪ್ರಯಾಣದ ಬಗ್ಗೆ ಎಸ್‌‍ಐಟಿಗೆ ಮಾಹಿತಿ ಇರಬಹುದು ಆದರೆ ಎಲ್ಲವನ್ನೂ ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುವುದಿಲ್ಲ ಎಂದರು.


ನಿನ್ನೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಸಮಾಲೋಚನೆಗಳಾಗಿವೆ. ಮುಖ್ಯಮಂತ್ರಿಗಳು ನೀಡಿರುವ ಸೂಚನೆಗಳನ್ನು ನಾವು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಮನೆಗೆ ತಾವು ಭೇಟಿ ನೀಡಿದ್ದು, ಲೋಕಸಭಾ ಚುನಾವಣೆ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆಸಿದ್ದೇವೆ. ಸತೀಶ್‌ ಜಾರಕಿಹೊಳಿ ಪುತ್ರಿ ಅಭ್ಯರ್ಥಿಯಾಗಿದ್ದಾರೆ. ಅವರು ಗೆಲ್ಲಲಿದ್ದಾರೆ ಎಂಬ ವಿಶ್ವಾಸವಿದೆ. ನಮ ಬಳಿ ಇರುವ ಮಾಹಿತಿಯನ್ನೂ ಹಂಚಿಕೊಂಡಿದ್ದೇವೆ ಎಂದರು.

ಸಮುದಾಯವಾರು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಪರಮೇಶ್ವರ್‌ ಸ್ಪಷ್ಟಪಡಿಸಿದರು.ಸಾಹಿತಿಗಳು ಬರೆದಿರುವ ಪತ್ರವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ, ಅವರಿಗೆ ಸಾಮಾಜಿಕ ಕಳಕಳಿ ಇರುತ್ತದೆ, ಸಾಮಾಜಿಕ ಆಗುಹೋಗುಗಳನ್ನು ಪ್ರತಿನಿತ್ಯ ಗಮನಿಸುತ್ತಿರುತ್ತಾರೆ, ಹೀಗಾಗಿ ಅವರ ಅಭಿಪ್ರಾಯಗಳನ್ನು ಪರಿಗಣಿಸುತ್ತೇವೆ.

ಮೇಲಾಗಿ ಹಾಸನದ ಪೆನ್‌ಡ್ರೈವ್‌ ಪ್ರಕರಣವನ್ನೇ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ . ಸಾಹಿತಿಗಳ ಪತ್ರ ಮತ್ತಷ್ಟು ಎಚ್ಚರಿಕೆ ನೀಡಿದಂತಾಗಿದೆ. ಪತ್ರದಲ್ಲಿರುವ ಅಂಶಗಳನ್ನು ಎಸ್‌‍ಐಟಿ ಅಧಿಕಾರಿಗಳು ಗಮನಿಸುತ್ತಾರೆ. ತನಿಖೆ ನಡೆಯುತ್ತಿರುವುದರಿಂದ ನಾವು ಏನನ್ನೂ ಹೇಳಲು ಅವಕಾಶ ಇಲ್ಲ ಎಂದು ಹೇಳಿದರು.

RELATED ARTICLES

Latest News