ಬೆಂಗಳೂರು, ಜು.19– ಪ್ರಯಾಣಿಕರಂತೆ ಬಿಎಂಟಿಸಿ ಬಸ್ ಹತ್ತಿ ಮಹಿಳೆಯರ ಗಮನ ಬೇರೆಡೆ ಸೆಳೆದು ಹಣ, ಆಭರಣ ಎಗರಿಸಿ ವಾಪಸ್ ಆಂಧ್ರಕ್ಕೆ ಪರಾರಿಯಾಗುತ್ತಿದ್ದ ಕುಪ್ಪಂ ಗ್ಯಾಂಗ್‌ನ ಇಬ್ಬರು ಮಹಿಳೆಯರನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿ 80 ಲಕ್ಷ ರೂ. ಮೌಲ್ಯದ 899 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ತೂರು ಜಿಲ್ಲೆ ಕುಪ್ಪಂ ತಾಲ್ಲೂಕಿನ ಲಾವಣ್ಯ ಮತ್ತು ಮೀನಾ ಬಂಧಿತ ಆರೋಪಿತೆಯರು.ಈ ಗ್ಯಾಂಗ್‌ನಲ್ಲಿ ಇನ್ನೂ ಹಲವು ಮಹಿಳೆಯರಿದ್ದು, ಕುಪ್ಪಂನಿಂದ ಮೂರ್ನಾಲ್ಕು ಮಂದಿ ನಗರಕ್ಕೆ ಬಂದು ಹೆಚ್ಚು ಪ್ರಯಾಣಿಕರು ಇರುವ ಬಿಎಂಟಿಸಿ ಬಸ್‌ಗಳನ್ನೇ ಟಾರ್ಗೆಟ್ ಮಾಡಿಕೊಂಡು ಸಹ ಪ್ರಯಾಣಿಕರಂತೆ ಹತ್ತಿ ಮಹಿಳೆಯರ ಗಮನ ಸೆಳೆದು ಅವರುಗಳ ಬ್ಯಾಗ್‌ಗಳಿಂದ ಹಣ, ಆಭರಣ ಅಪಹರಿಸಿ ನಂತರ ವಾಪಸ್ ತನ್ನ ಊರಿಗೆ ಪರಾರಿಯಾಗುತ್ತಿದ್ದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.
ಈ ಗ್ಯಾಂಗ್ ನಗರವಲ್ಲದೆ, ದಾವಣಗೆರೆ, ತುಮಕೂರು, ಶಿರಾದಲ್ಲೂ ತನ್ನ ಕೈಚಳಕ ತೋರಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಈ ಗ್ಯಾಂಗ್ ಹೊರ ರಾಜ್ಯಗಳಲ್ಲೂ ಈ ರೀತಿಯ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದ್ದು , ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಹಿಳೆಯೊಬ್ಬರು ತಮ ಕುಟುಂಬದೊಂದಿಗೆ ಕೆ.ಆರ್ ಪುರ ಜ್ಯುವೆಲೆರ್‌ರಸ ಅಂಗಡಿಯ ಮುಂಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಊರಿಗೆ ಹೋಗಲು ಬಸ್ ಹತ್ತುವಾಗ ಯಾರೋ ಕಳ್ಳರು ಅವರ ಗಮನ ಬೇರೆಡೆಗೆ ಸೆಳೆದು ಬ್ಯಾಗಿನಲ್ಲಿದ್ದ 156 ಗ್ರಾಂ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಹಲವಾರು ಸಿಸಿ ಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ ಗಾಂಧಿನಗರಲ್ಲಿರುವ ಲಾಡ್‌್ಜನಲ್ಲಿ ತಂಗಿದ್ದ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆರೋಪಿಗಳು ಕುಪ್ಪಂ ಗ್ಯಾಂಗ್ ಎಂಬುದು ಗೊತ್ತಾಗಿದೆ.
ಆರೋಪಿತೆಯರಿಬ್ಬರನ್ನು ಸುದೀರ್ಘ ವಿಚಾರಣೆ ಗೊಳಪಡಿಸಿ, ತಿರಪ್ಪತ್ತೂರುನ ಕರೂರು ವೈಶ್ಯ ಬ್ಯಾಂಕ್ ಅಡ ಇಟ್ಟಿದ್ದ 855 ಗ್ರಾಂ ಹಾಗೂ ಆರೋಪಿತೆಯರ ಮನೆಯಿಂದ 44 ಗ್ರಾಂ ಒಟ್ಟು 899 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 80 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಆರೋಪಿಗಳ ಬಂಧನದಿಂದ ಕೆ.ಆರ್ ಪುರಂ ಪೊಲೀಸ್ ಠಾಣೆಯ 4 ಪ್ರಕರಣಗಳು , ಮಹದೇವಪುರ-2, ಯಶವಂತಪುರ ಹಾಗೂ ರಾಮಮೂರ್ತಿ ನಗರ ಪೊಲೀಸಗಿ ಠಾಣೆಯ ತಲಾ ಒಂದು ಪ್ರಕರಣವು ಸೇರಿದಂತೆ ಒಟ್ಟು 8 ಪ್ರಕರಣಗಳು ಪತ್ತೆಯಾಗಿರುತ್ತವೆ.