ಬೆಂಗಳೂರು,ಮೇ5- ಕಳೆದ ವರ್ಷದ ಮುಂಗಾರು ಹಾಗೂ ಹಿಂಗಾರು ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಪೂರ್ವ ಮುಂಗಾರು ಮಳೆಯು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ.
ಒಂದೆಡೆ ತೀವ್ರ ಬಿಸಿಲಿನ ಬೇಗೆ ಹೆಚ್ಚಳವಾದರೆ ಮತ್ತೊಂದೆಡೆ ಮಳೆ ಕೊರತೆ ಉಂಟಾಗಿದೆ. ಹೀಗಾಗಿ ಸಕಾಲಕ್ಕೆ ಸರಿಯಾಗಿ ಮುಂಗಾರು ಪ್ರಾರಂಭವಾಗಿ ಉತ್ತಮ ಮಳೆಯಾಗದಿದ್ದರೆ ಜೂನ್ ತಿಂಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ.
ಈಗಾಗಲೇ ಬಹತೇಕ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿದ್ದು, ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಯಾವ ಜಲಾಶಯಗಳಿಗೂ ಒಳಹರಿವಿನ ಪ್ರಮಾಣ ಇಲ್ಲ. ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ ನೀರಿನ ಸಂಗ್ರಹ ಶೇ.22ರಷ್ಟು ಮಾತ್ರ ಇದೆ. ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪಾ, ವರಾಹಿ ಜಲಾಶಯಗಳ ವ್ಯಾಪ್ತಿಯಲ್ಲಿ ಶೇ.19ರಷ್ಟು ನೀರಿದ್ದರೆ, ಕಾವೇರಿ ನದಿಪಾತ್ರದ ಜಲಾಶಯಗಳಲ್ಲಿ ಶೇ.27ರಷ್ಟು ಹಾಗೂ ಕೃಷ್ಣಾ ಕೊಳ್ಳದ ಜಲಾಶಯಗಳಲ್ಲಿ ಶೇ.21ರಷ್ಟು ಮಾತ್ರ ನೀರಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಕಳೆದ ವರ್ಷ ಇದೇ ಅವಧಿಯಲ್ಲಿ 14 ಜಲಾಶಯಗಳಲ್ಲಿ 245.62 ಟಿಎಂಸಿ ಅಡಿಯಷ್ಟು ನೀರಿತ್ತು. ಪ್ರಸ್ತುತ 199.91 ಅಡಿಯಷ್ಟು ಮಾತ್ರ ನೀರಿದೆ.ರಾಜ್ಯದ ಪ್ರಮುಖ ಜಲಾಶಯಗಳಲ್ಲಿ 895.62 ಟಿಎಂಸಿ ನೀರು ಗರಿಷ್ಠ ಸಂಗ್ರಹ ಸಾಮರ್ಥ್ಯವಿದೆ.
ಕಾವೇರಿ ನದಿಪಾತ್ರದ ಹಾರಂಗಿ, ಹೇಮಾವತಿ, ಕೆಆರ್‌ಎಸ್, ಕಬಿನಿ ಜಲಾಶಯಗಳಲ್ಲಿ ಒಟ್ಟು 30.46 ಟಿಎಂಸಿಯಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 38.87 ಟಿಎಂಸಿಯಷ್ಟು ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 8 ಟಿಎಂಸಿಯಷ್ಟು ನೀರಿನ ಕೊರತೆ ಇದೆ.
ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಕೆಆರ್‌ಎಸ್ ಜಲಾಶಯದಲ್ಲಿ 11.08 ಟಿಎಂಸಿಯಷ್ಟು ನೀರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 3 ಟಿಎಂಸಿಯಷ್ಟು ನೀರು ಕಡಿಮೆ ಇದೆ. ಕೃಷ್ಣಾ ಕೊಳ್ಳದ ಜಲಾಶಯಗಳಲ್ಲಿ 89.59 ಟಿಎಂಸಿಯಷ್ಟು ಮಾತ್ರ ನೀರಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 94.87 ಟಿಎಂಸಿ ಅಡಿಯಷ್ಟು ನೀರಿತ್ತು.
ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪಾ, ವಾರಾಹಿ ಜಲಾಶಯಗಳಲ್ಲಿ 62.87 ಟಿಎಂಸಿಯಷ್ಟು ಮಾತ್ರ ನೀರಿದೆ. ಕಳೆದ ವರ್ಷ 85.23 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿತ್ತು.