ಮೈಸೂರು,ಡಿ.28- ನೂತನ ವರ್ಷ 2025ನ್ನು ಸ್ವಾಗತಿಸಲು ಮೈಸೂರು ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸಲು ಸಿದ್ದತೆ ನಡೆದಿದೆ.ಕಳೆದ 4 ದಿನಗಳಿಂದ ಲಡ್ಡು ತಯಾರಿ ಕಾರ್ಯ ಭರದಿಂದ ಸಾಗಿದೆ.
ದೇವಾಲಯದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿ ಶ್ರೀನಿವಾಸ್‌ರವರ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ಬಾಣಸಿಗರಿಂದ ಲಡ್ಡು ಸಿದ್ಧವಾಗುತ್ತಿದೆ.2 ಕೆಜಿ ತೂಕದ 10 ಸಾವಿರ ಲಡ್ಡು, 150 ಗ್ರಾಂ ತೂಕದ 2 ಲಕ್ಷ ಲಡ್ಡು ತಯಾರಿ ಭರದಿಂದ ಸಾಗುತ್ತಿದೆ.
ಲಡ್ಡು ತಯಾರಿಕೆಗಾಗಿ 100 ಕ್ವಿಂಟಾಲ್ ಕಡ್ಲೆಹಿಟ್ಟು, 200 ಕ್ವಿಂಟಾಲ್ ಸಕ್ಕರೆ, 10 ಸಾವಿರ ಲೀ. ಖಾದ್ಯ ತೈಲ, 500 ಕೆಜಿ ಗೋಡಂಬಿ, 500 ಕೆಜಿ ಒಣದ್ರಾಕ್ಷಿ, 250 ಕೆಜಿ ಬಾದಾಮಿ, 1000 ಕೆಜಿ ಡೈಮಂಡ್ ಸಕ್ಕರೆ, 2000 ಕೆಜಿ ಬೂರಾ ಸಕ್ಕರೆ, 50 ಕೆಜಿ ಪಿಸ್ತಾ, ಏಲಕ್ಕಿ, ಜಾಕಾಯಿ, ಪಚ್ಚಕರ್ಪೂರ, 200 ಕೆಜಿ ಲವಂಗ ಬಳಸಲಾಗಿದೆ.
ಜ.1 ರ ಬೆಳಿಗ್ಗೆ 4 ಗಂಟೆಗೆ ವಿಶೇಷ ಪೂಜೆ ನಂತರ ಭಕ್ತರಿಗೆ ಲಡ್ಡು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ದೇವಾಲಯದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ತಿಳಿಸಿದ್ದಾರೆ.ಲೋಕಕಲ್ಯಾಣಾರ್ಥವಾಗಿ ಲಡ್ಡು ವಿತರಣಾ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿದೆ ಎಂದು ಭಾಷ್ಯಂ ಸ್ವಾಮೀಜಿ ಅವರು ತಿಳಿಸಿದರು.
1994ರಲ್ಲಿ ವರನಟ ಡಾ.ರಾಜಕುಮಾರ್ ಅವರು ದೇವಾಲಯಕ್ಕೆ ಆಗಮಿಸಿದಂತ ಸಂದರ್ಭದಲ್ಲಿ ತಿರುಪತಿಗೆ ಜನತೆ ಹೋಗಿ ಬರುವುದು ಇತ್ತೀಚಿನ ದಿನಗಳಲ್ಲಿ ಕಷ್ಟವಾಗುತ್ತಿದೆ. ಅದರಲ್ಲೂ ತಿರುಪತಿ ಲಡ್ಡು ಪ್ರಸಾದ ದೊರೆಯುವುದು ಇನ್ನೂ ಕಷ್ಟ. ಹಾಗಾಗಿ ನಿಮ ದೇವಾಲಯದಲ್ಲಿಯೇ ತಿರುಪತಿ ಮಾದರಿ ಲಡ್ಡು ಏಕೆ ಮಾಡಬಾರದು ಎಂದು ಹೇಳಿದರು. ಹಾಗಾಗಿ ನಾವು ರಾಜಕುಮಾರ್‌ರವರು ಹೇಳಿದಂತೆ ತಿರುಪತಿ ಮಾದರಿಯಲ್ಲಿ ಲಡ್ಡುವನ್ನು ಮಾಡಲು ಕ್ರಮ ಕೈಗೊಂಡೆವು ಎಂದು ಶ್ರೀಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಕುಲಪತಿ ಲೋಕನಾಥ್, ಡಾ. ರಾಜಕುಮಾರ್ ಅವರ ಪುತ್ರಿ ಲಕ್ಷಿ ಹಾಗೂ ಅಳಿಯ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.