ಬೆಂಗಳೂರು, ಜು.9– ಗೋವಿನಿಂದ ಗ್ರಾಹಕರವರೆಗೆ ಎಂಬ ಶೀರ್ಷಿಕೆಯನ್ನು ಹೊತ್ತು ಕಳೆದ 40 ವರ್ಷಗಳಿಂದ ಗ್ರಾಹಕರ ಅಭಿರುಚಿಗೆ ತಕ್ಕಂತೆ ನಂದಿನಿ ಬ್ರಾಂಡ್ ಅಡಿಯಲ್ಲಿ 170 ಕ್ಕೂ ಅಧಿಕ ಉತ್ಕೃಷ್ಟ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಂದಿರುವ ಸಂಸ್ಥೆ ಈಗ ಲಘು ಉಪಾಹಾರವನ್ನು ಹೊರತಂದಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ದಿನನಿತ್ಯ ಕಚೇರಿ ಬಳಕೆ ಮತ್ತು ಆಯೋಜಿಸಲಾಗುವ ಸಭೆಗಳಿಗೆ ಆಗತ್ಯವಿರುವ ಲಘು ಉಪಾಹಾರವನ್ನು ಒದಗಿಸಲು ಇರುವ ಸುವರ್ಣಾವಕಾಶವನ್ನು ಕಹಾಮ ಪರಿಗಣಿಸಿ ನಂದಿನಿ ಬ್ರಾಂಡ್‌ನಲ್ಲಿ ಲಭ್ಯವಿರುವ ಶುಚಿ ಮತ್ತು ರುಚಿಕರವಾದ ಉತ್ಪನ್ನಗಳನ್ನು ಬಳಸಿಕೊಂಡು ವಿನೂತನ ಪ್ಯಾಕ್‌ನಲ್ಲಿ ನಂದಿನಿ ಲಘು ಉಪಾಹಾರದ ಪ್ಯಾಕ್ ಅನ್ನು ಸಿದ್ಧಪಡಿಸಲಾಗಿದೆ.
ವಿಧಾನಸೌಧದಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಗಳು ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸಾಂಕೇತಿಕವಾಗಿ ನಂದಿನಿ ಲಘು ಉಪಾಹಾರ ಪ್ಯಾಕ್ ಅನ್ನು ಬಿಡುಗಡೆಗೊಳಿಸಿದರು.
ನಂದಿನಿ ಲಘು ಉಪಹಾರದ ಪ್ಯಾಕ್ ಅನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಕಹಾಮ ಸಿದ್ದವಿದ್ದು, 4ಜಿ ವಿನಾಯಿತಿ ನೀಡಿ ಆದೇಶವನ್ನು ಹೊರಡಿಸಲು ರಾಜ್ಯ ಸರ್ಕಾರವನ್ನು ಈಗಾಗಲೇ ಮನವಿ ಮಾಡಲಾಗಿರುವ ವಿಷಯವನ್ನು ಸದರಿ ಸಭೆಯಲ್ಲಿ ಮುಖ್ಯಮಂತ್ರಿಗಳ ಅಧ್ಯ ಅವಗಾಹನೆಗೆ ತರಲಾಯಿತು ಮತ್ತು 4ಜಿ ವಿನಾಯಿತಿ ನೀಡಿ ಸೂಕ್ತ ಆದೇಶವನ್ನು ಹೊರಡಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲು ಮನವಿ ಮಾಡಲಾಗಿದೆ.
ಉಪ ಮುಖ್ಯಮಂತ್ರಿ, ಗೃಹ ಮಂತ್ರಿ, ಸಹಕಾರ ಸಚಿವರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಸಚಿವರು, ಇಂಧನ ಸಚಿವರು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಕಹಾಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.