ಬೆಂಗಳೂರು,ನ.19– ಕೃಷಿ ಸಾಲಗಳಿಗಾಗಿ ಕೇಂದ್ರಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ನೀಡಲಾಗುವ ಆರ್ಥಿಕ ಸಾಲ ಸೌಲಭ್ಯದಲ್ಲಿ ಕಡಿತವಾಗಿರುವುದನ್ನು ವಿರೋಧಿಸಿ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿರುವ ಸಚಿವರು, ರಾಜ್ಯಪಾಲರನ್ನು ಭೇಟಿ ಮಾಡಿ ಈ ಕುರಿತು ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತು ಕೃಷಿ ಸಚಿವ ಚೆಲುವರಾಯಸ್ವಾಮಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಸಾಲದ ಬಾಬ್ತಿನಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ರಾಜಣ್ಣ ಮಾತನಾಡಿ, ಕಳೆದ ಬಾರಿ 5,600 ಕೋಟಿ ರೂ. ಕೃಷಿ ಕ್ಷೇತ್ರಕ್ಕೆ ಸಾಲ ನೀಡಲಾಗಿತ್ತು. ಈ ಬಾರಿ 2,340 ಕೋಟಿ ರೂ.ಗಳನ್ನು ಮಾತ್ರ ಒದಗಿಸಲಾಗಿದೆ. ಶೇ.58 ರಷ್ಟು ಕೃಷಿ ಸಾಲದ ಪ್ರಮಾಣವನ್ನು ಕಡಿತ ಮಾಡಲಾಗಿದೆ ಎಂದು ಆರೋಪಿಸಿದರು.
ಗ್ರಾಮೀಣ ಭಾಗದಲ್ಲಿ ರೈತರು ಆರ್ಥಿಕವಾಗಿ ಮುಂದುವರೆಯಬೇಕು ಎಂಬ ಕಾರಣಕ್ಕಾಗಿ ಪ್ರತಿ ವರ್ಷ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ರಿಯಾಯಿತಿ ಬಡ್ಡಿದರದ ಸಾಲಸೌಲಭ್ಯ ನೀಡಲಾಗುತ್ತಿದೆ. ಇದಕ್ಕಾಗಿ ನಬಾರ್ಡ್ ರಾಜ್ಯಸರ್ಕಾರಕ್ಕೆ ಶೇ.4.5ರ ಬಡ್ಡಿದರದಲ್ಲಿ ಸಾಲ ರೂಪದ ಆರ್ಥಿಕ ನೆರವು ನೀಡುತ್ತಿತ್ತು. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಮತ್ತು ರಿಯಾಯಿತಿ ಬಡ್ಡಿದರದಲ್ಲಿ ಸಾಲ ನೀಡಿ ಕೃಷಿ ಚಟುವಟಿಕೆಗಳನ್ನು ಬಲವರ್ಧನೆಗೊಳಿಸಲಾಗುತ್ತಿತ್ತು ಎಂದು ವಿವರಿಸಿದರು.
ರಾಜ್ಯಸರ್ಕಾರ ಮನವಿ ಸಲ್ಲಿಸಿದ ಹೊರತಾಗಿಯೂ ಸಾಲದ ಪ್ರಮಾಣವನ್ನು ಕಡಿತ ಮಾಡಲಾಗಿದೆ. ನಬಾರ್ಡ್ನ ಈ ಕ್ರಮದಿಂದ ರೈತರಿಗೆ ಕೃಷಿ ಸಾಲ ನೀಡಲು ಕಷ್ಟವಾಗುತ್ತಿದೆ. ಸಹಕಾರ ವ್ಯವಸ್ಥೆಯಲ್ಲಿ ಸಾಲ ದೊರೆಯದೇ ಇದ್ದರೆ ರೈತರು ಖಾಸಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತಾರೆ ಹಾಗೂ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರ ನೆರವಿಗೆ ಧಾವಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದೇವೆ. ಅಲ್ಲಿಂದ ಉತ್ತರ ಬರೆದಿದ್ದು, ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಲಾಗಿದೆ. ರಾಜ್ಯದ ಸಂಸದರು ಈ ಬಗ್ಗೆ ದನಿ ಎತ್ತಬೇಕು ಎಂದು ನಾವು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೆ ಅಲ್ಲಿಂದ ಸಕಾರಾತಕ ಸ್ಪಂದನೆಗಳಿಲ್ಲ ಎಂದರು.
ರಾಜ್ಯಸರ್ಕಾರ 25 ಸಾವಿರ ಕೋಟಿ ರೂ.ಗಳನ್ನು ರೈತರಿಗೆ ಸಾಲದ ರೂಪದಲ್ಲಿ ನೀಡಿದೆ. ನಬಾರ್ಡ್ನ ಬಡ್ಡಿದರ ಹೆಚ್ಚಿದ್ದಾಗಿಯೂ ನಾವು ಅದರ ಹೊರೆಯನ್ನು ಭರಿಸುತ್ತಿದ್ದೇವೆ. ಕೇಂದ್ರ ಸಹಕಾರ ಸಚಿವ ಅಮಿತ್ ಷಾ, ಕೇಂದ್ರ ಹಣಕಾಸು ಸಚಿವರು ರಾಜ್ಯದ ನೆರವಿಗೆ ಬರುತ್ತಿಲ್ಲ. ಕೇಂದ್ರದ ತೀರ್ಮಾನಗಳು ರಾಜ್ಯಕ್ಕೆ ಮಾರಕವಾಗುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣೆ ನಿಧಿಯಡಿ ನೀಡುವ ನೆರವನ್ನೂ ಕಡಿತ ಮಾಡಲಾಗಿದೆ. ಬರ ಹಾಗೂ ನೆರೆ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರು ಸಾಲಮನ್ನಾ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ. ಆದರೆ ಕೇಂದ್ರದ ಅಸಹಕಾರದಿಂದ ಸಾಲ ನೀಡುವುದೇ ಕಷ್ಟವಾಗುತ್ತಿದೆ ಎಂದು ವಿಷಾದಿಸಿದರು.
ಈ ಹಿಂದೆ ಜಗದೀಶ್ ಶೆಟ್ಟರ್ರವರು ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ರೂ.ಗಳವರೆಗೂ ಸಾಲಮನ್ನಾ ಮಾಡಲಾಗಿತ್ತು. 2013 ರಿಂದ 2018 ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 50 ಸಾವಿರ ರೂ.ಗಳವರೆಗೂ 2018 ರ ನಂತರ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 1 ಲಕ್ಷ ರೂ.ವರೆಗೂ ಕೃಷಿ ಸಾಲ ಮನ್ನಾ ಮಾಡಿದ್ದರು.
ಕೇಂದ್ರ ಸರ್ಕಾರವೂ ರೈತರ ಸಾಲಮನ್ನಾ ಮಾಡಬೇಕು ಎಂದು ರಾಜ್ಯಸರ್ಕಾರ ಮನವಿ ಮಾಡಿದಾಗ ಅರ್ಥಿಕವಾಗಿ ದೇಶ ದಿವಾಳಿಯಾಗುತ್ತದೆ ಎಂದು ಹೇಳಿ ಕೇಂದ್ರದ ಬಿಜೆಪಿ ಆಡಳಿತ ಸಾಲಮನ್ನಾವನ್ನು ತಿರಸ್ಕಾರ ಮಾಡಿತ್ತು. ಆದರೆ ಶ್ರೀಮಂತರ ಮತ್ತು ಕಾರ್ಪೊರೇಟ್ ಸಂಸ್ಥೆಗಳ 14 ಲಕ್ಷ ಕೋಟಿ ರೂ.ಗಳ ಬೃಹತ್ ಮಟ್ಟದ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ವಿವರಿಸಿದರು.
ರೈತರ ವಿಚಾರ ಬಂದಾಗ ಆರ್ಥಿಕ ದಿವಾಳಿಯಾಗುತ್ತದೆ ಎಂದು ಹೇಳುವ ಕೇಂದ್ರ ಸರ್ಕಾರ ಕಾರ್ಪರೇಟ್ ತೆರಿಗೆಯನ್ನು ಕಡಿತ ಮಾಡಿದೆ. ಸಹಕಾರ ಕ್ಷೇತ್ರದ ಸೆಸ್ ಕಡಿಮೆ ಮಾಡಲು ಹಿಂದೇಟು ಹಾಕಿದೆ. ಜಿಎಸ್ಟಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ 3.70 ಲಕ್ಷ ರೂ. ನೆರವನ್ನು ನೀಡಿ, ಮತ್ತೊಂದು ಕಡೆ ಇದೇ ಯೋಜನೆಯಿಂದ ಶೇ.28 ರಷ್ಟು ಜಿಎಸ್ಟಿ ಕಡಿತ ಮಾಡುವ ಮೂಲಕ ಈ ಕೈಲಿ ಕೊಟ್ಟು, ಆ ಕೈಲಿ ಕಿತ್ತುಕೊಳ್ಳುತ್ತಿದೆ ಎಂದರು.
ಸಚಿವ ಚೆಲುವರಾಯಸ್ವಾಮಿ ಮಾತನಾಡಿ, 2020-21 ರಲ್ಲಿ 5,500 ಕೋಟಿ ರೂ., 2021-22 ರಲ್ಲಿ 5,483 ಕೋಟಿ ರೂ., 2022-23 ರಲ್ಲಿ 5,550 ಕೋಟಿ ರೂ., 2023-24 ರಲ್ಲಿ 5,600 ಕೋಟಿ ರೂ. ನಬಾರ್ಡ್ನಿಂದ ಸಾಲಸೌಲಭ್ಯ ಸಿಕ್ಕಿದೆ. 2024-25ನೇ ಸಾಲಿಗೆ 2,300 ಕೋಟಿ ರೂ. ಮಾತ್ರ ದೊರೆತಿದೆ. ರಾಜ್ಯದಿಂದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಮತ್ತು ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾರೆ. ಯಾರೂ ಇದರ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಸರ್ಕಾರ 2 ಲಕ್ಷ ರೂ.ಗಳವರೆಗೂ ಶೂನ್ಯ ಬಡ್ಡಿದರದಲ್ಲಿ ಅನಂತರ ರಿಯಾಯಿತಿ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುತ್ತಿದೆ. ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆೆ. ರೈತರ ಆದಾಯ ನೋಡಿ ಸಾಲ ನೀಡಲು ಸಾಧ್ಯವೇ? ಎಂದು ಚೆಲುವರಾಯಸ್ವಾಮಿ ಪ್ರಶ್ನಿಸಿದರು.
ಈ ಹಿಂದೆ ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯಿತು. ಈಗ ಕೃಷಿ ಸಾಲದ ವಿಚಾರವಾಗಿಯೂ ನ್ಯಾಯಾಂಗ ಹೋರಾಟ ನಡೆಸಬೇಕಾಗುತ್ತದೆ. ಅದಕ್ಕೂ ಮುನ್ನ ರಾಜ್ಯಪಾಲರನ್ನು ಭೇಟಿ ಮಾಡಿ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.