Monday, December 2, 2024
Homeರಾಜ್ಯಡಿ.9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಡಿ.9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

Winter session in Belgaum from December 9th

ಬೆಂಗಳೂರು, ನ.19-ರಾಜ್ಯ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ಡಿ.9ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿದೆ. ಪ್ರತಿ ವರ್ಷದಂತೆ ಈ ಬಾರಿಯು ಸುವರ್ಣ ವಿಧಾನಸೌಧದಲ್ಲಿ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ದಿನಾಂಕ ನಿರ್ಧರಿಸುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿತ್ತು. ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸುವ ಸಂಪುಟ ಸಭೆಯ ತೀರ್ಮಾನಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದಾರೆ.

ಸುವರ್ಣ ವಿಧಾನಸೌಧದಲ್ಲಿ ಡಿ.9ರಂದು ಬೆಳಿಗ್ಗೆ 11ಗಂಟೆಗೆ ವಿಧಾಸಭೆ ಮತ್ತು ವಿಧಾನ ಪರಿಷತ್ತಿನ ಅಧಿವೇಶನಗಳು ಸಮಾವೇಶಗೊಳ್ಳುವಂತೆ ರಾಜ್ಯಪಾಲರು ಕರೆದಿದ್ದಾರೆ. ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಮೊದಲ ದಿನ ಇತ್ತೀಚೆಗೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆಯಾಗಲಿದೆ.

ಡಿ.10ರಿಂದ ಸರ್ಕಾರಿ ಕಾರ್ಯಕಲಾಪಗಳು ನಡೆಯಲಿದ್ದು, ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ, ಶಾಸನ ರಚನೆ ಸೇರಿದಂತೆ ಆಯಾ ದಿನ ನಗದಿಪಡಿಸಿದ ಕಾರ್ಯಕಲಾಪಗಳು ಜರುಗಲಿವೆ. ಡಿ.20ರವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ನಡೆಯುವ ಅಧಿವೇಶನ ಇದಾಗಿದೆ.

ರಾಜ್ಯದ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಜೊತೆಗೆ ರಾಜ್ಯಕೀಯ ವಿಚಾರಗಳು ಪರೋಕ್ಷವಾಗಿ ಅಧಿವೇಶನದ ಸಂದರ್ಭದಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ.

ಎಪಿಎಲ್ ಪಡಿತರ ಚೀಟಿ ರದ್ದು, ರೈತರ ಜಮೀನುಗಳಿಗೆ ವಕ್‌್ಫ ಬೋರ್ಡ್ ನೋಟೀಸ್, ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸಕಾಲಕ್ಕೆ ನೀಡದಿರುವುದು, ಮೂಡಾ ಹಗರಣ, ವಾಲೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪ ಮೊದಲಾದ ಪ್ರಮುಖ ವಿಚಾರಗಳು ಅಧಿವೇಶನದಲ್ಲಿ ಪ್ರಸ್ತಾಪಗೊಳ್ಳಲಿವೆ. ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿವೇಶನಕ್ಕೆ ಸಜ್ಜಾಗುತ್ತಿದ್ದು, ತೀವ್ರವಾದ ವಾಕ್ಸಮರಕ್ಕೆ ಅಧಿವೇಶನ ವೇದಿಕೆಯಾಗುವ ಸಾಧ್ಯತೆಗಳಿವೆ.

RELATED ARTICLES

Latest News