ಬೆಂಗಳೂರು,ನ.19- ರಾಜ್ಯದಲ್ಲಿ ಹಿಂಗಾರು ಮಳೆ ಬಹುತೇಕ ಸ್ಥಗಿತ ವಾಗಿದ್ದು, ಮಾಗಿ ಚಳಿ ತೀವ್ರವಾಗಲಿದೆ. ಹಿಂಗಾರು ಮಳೆ ದುರ್ಬಲಗೊಂಡಿದ್ದು, ಒಂದೆರೆಡು ಕಡೆ ಚದುರಿದಂತೆ ಮಳೆಯಾಗಲಿದೆ. ಈಶಾನ್ಯ ದಿಕ್ಕಿನಿಂದ ತಂಪಾದ ಮೇಲೈ ಗಾಳಿ ಬೀಸುವುದರಿಂದ ಚಳಿಗಾಲ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ. ಈ ಬಾರಿ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಕನಿಷ್ಠ ಉಷ್ಣಾಂಶ ಗಣನೀಯವಾಗಿ ಇಳಿಕೆಯಾಗಲಿದ್ದು, ಚಳಿಯ ತೀವ್ರತೆ ಹೆಚ್ಚಾಗಲಿದೆ.
ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಮುಂದಿನ ವಾರ ಮತ್ತಷ್ಟು ಅಧಿಕಗೊಳ್ಳುವ ಮುನ್ಸೂಚನೆಗಳಿವೆ. ಬೀದರ್ನಲ್ಲಿ 12 ಡಿ.ಸೆಂ. ಹಾಗೂ ವಿಜಯಪುರದಲ್ಲಿ 14 ಡಿ.ಸೆಂ.ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಮುಂದಿನ ಒಂದು ವಾರದಲ್ಲಿ ರಾಜ್ಯದಲ್ಲಿ ಒಣಹವೆ ಮುಂದು ವರೆಯಲಿದ್ದು, ಮಳೆಯ ಪ್ರಮಾಣ ವಿರಳ. ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ ಭಾಗದಲ್ಲಿ ಕನಿಷ್ಠ ಉಷ್ಣಾಂಶ 12 ರಿಂದ 14 ಡಿ.ಸೆ.ನಷ್ಟು ಇರಲಿದೆ ಎಂದು ಹೇಳಿದರು. ರಾಜಧಾನಿ ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, 16 ರಿಂದ 18 ಡಿ.ಸೆ.ನಷ್ಟು ಇರಲಿದೆ.
ಹೀಗಾಗಿ ಈ ಬಾರಿಯ ಚಳಿಗಾಲ ಹೆಚ್ಚಿನ ಚಳಿಯಿಂದ ಕೂಡಿರಲಿದೆ. ಮುಂಜಾನೆ 4 ರಿಂದ 8 ಗಂಟೆಯ ನಡುವಿನ ಅವಧಿಯಲ್ಲಿ ಶೀತ ವಾತಾ ವರಣ ಹೆಚ್ಚಾಗಲಿದ್ದು ಕೆಮು, ನೆಗಡಿಯಂತಹ ಆರೋಗ್ಯ ಸಮಸ್ಯೆ ಉಲ್ಬಣವಾಗ ಬಹುದು. ಉಸಿರಾಟದ ತೊಂದರೆ ಹಾಗೂ ಕೀಲು, ಮೂಳೆ ನೋವಿನ ಸಮಸ್ಯೆ ಉಳ್ಳವರು ಬೆಚ್ಚಗಿನ ಉಡುಪು ಧರಿಸಿ, ಬೆಚ್ಚಗಿನ ವಾತಾವರಣದಲ್ಲಿರುವುದು ಸೂಕ್ತ. ಆಗಾಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಚಳಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಎಂಬ ಸಲಹೆಯನ್ನು ಅವರು ಮಾಡಿದ್ದಾರೆ.
ಫೆಸಿಫಿಕ್ ಮಹಾಸಾಗರದ ಮೇಲೈ ಉಷ್ಣಾಂಶವು ಸಾಮಾನ್ಯಕ್ಕಿಂತ ಕಡಿಮೆ ಯಾಗುವ ಪರಿಸ್ಥಿತಿಯನ್ನು ಲಾನಿನ ಎಂದು ವೈಜ್ಞಾನಿಕವಾಗಿ ಕರೆಯಲಾಗು ತ್ತದೆ. ಈ ಪರಿಸ್ಥಿತಿ ಉಂಟಾದಾಗ ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ. ಈ ವಾತಾವರಣ ನವೆಂಬರ್, ಡಿಸೆಂಬರ್ನಲ್ಲಿ ಉಂಟಾಗುವ ನಿರೀಕ್ಷೆಯಿದೆ. ಹೀಗಾಗಿ ಡಿಸೆಂಬರ್ನಿಂದ ಜನವರಿಯವರಿಗೂ ಚಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.
ಜೊತೆಗೆ ಉತ್ತರ ಭಾರತದಿಂದ ದಕ್ಷಿಣ ಭಾರತದತ್ತ ತಂಪಾದ ಮೇಲೈ ಗಾಳಿ ಬೀಸುವುದರಿಂದ ಕನಿಷ್ಠ ತಾಪಮಾನ ಇಳಿಕೆಯಾಗಿ ಚಳಿಯ ತೀವ್ರತೆ ಹೆಚ್ಚಲಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಡಿಸೆಂಬರ್ನಲ್ಲಿ ಕನಿಷ್ಠ ತಾಪಮಾನ 8 ರಿಂದ 10 ಡಿ.ಸೆ. ಗೆ ಇಳಿಕೆಯಾಗುವ ಸಾಧ್ಯತೆಗಳಿವೆ. ಅದೇ ರೀತಿ ಬೆಂಗಳೂರಿನಲ್ಲಿ 12 ರಿಂದ 14 ಡಿ.ಸೆ. ನಷ್ಟು ದಾಖಲಾಗುವ ಮುನ್ಸೂಚನೆಗಳಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.