Thursday, February 22, 2024
Homeಮನರಂಜನೆಲೀಲಮ್ಮ ಇನ್ನು ನೆನಪು ಮಾತ್ರ

ಲೀಲಮ್ಮ ಇನ್ನು ನೆನಪು ಮಾತ್ರ

ಕನ್ನಡ ಚಿತ್ರರಂಗದ ಮಿನುಗುತಾರೆ, ಹಿರಿಯ ನಟಿ ಲೀಲಾವತಿ ಇಂದು ನಮ್ಮನ್ನ ಅಗಲಿದ್ದಾರೆ.ಕೆಲ ದಿನಗಳಿಂದ‌ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಇರುವ ತಮ್ಮ ತೋಟದ ಮನೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. 85 ವರ್ಷದ ಈ ಹಿರಿಯ ಜೀವ ಮಗ ವಿನೋದ್ ರಾಜ್ ಅವರನ್ನು ಒಂಟಿ ಮಾಡಿ ತೆರಳಿದೆ. ನಟನೆ, ಎಲ್ಲರನ್ನು ಸೆಳೆಯುವ ದನಿಯನ್ನ ಕನ್ನಡಿಗರು ಎಂದಿಗೂ ಮರೆಯುವುದಿಲ್ಲ. ಯಾವ ಪಾತ್ರಕ್ಕೂ ಸೈ ಎನ್ನುವ ಇವರು ಕ್ಯಾಮರಾ ಮುಂದೆ ನಿಂತರೆ ಲೀಲಾಜಾಲವಾಗಿ ಅಭಿನಯ ಹರಿದು ಬರುತ್ತಿತ್ತು. ಕನ್ನಡ ಮಾತ್ರವಲ್ಲ, ತೆಲುಗು, ತಮಿಳು, ತುಳುವಿನಲ್ಲಿಯೂ ಅಭಿನಯಿಸಿ ಮೇರು ನಟರೊಂದಿಗೆ ಸ್ಕ್ರೀನ್ ಶೇರ್ ಮಾಡ್ಕೊಂಡಿದ್ದಾರೆ.

1953ರಲ್ಲಿ ಚಂಚಲ ಕುಮಾರಿ ಚತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಇವರು ಆರೂವರೆ ದಶಕಗಳ ಕಾಲಕನ್ನಡ, ತೆಲುಗು, ತಮಿಳು, ತುಳು ಭಾಷೆಯಲ್ಲಿ ಅಭಿನಯಿಸಿದ್ದಾರೆ.ಕನ್ನಡದಲ್ಲಿ ಮದುವೆ ಮಾಡಿ ನೋಡು,ಸಂತ ತುಕಾರಾಂ,ತುಂಬಿದ ಕೊಡ
ಕಣ್ತೆರೆದು ನೋಡು,ರಾಣಿ ಹೊನ್ನಮ್ಮ,ಗೆಜ್ಜೆ ಪೂಜೆ, ಸಿಪಾಯಿರಾಮು,ನಾಗರಹಾವು,ಭಕ್ತ ಕುಂಬಾರ,ಬಿಳಿ ಹೆಂಡ್ತಿ ನಾ ನಿನ್ನ ಮರೆಯಲಾರೆ,ಕಳ್ಳ ಕುಳ್ಳ,ಡಾಕ್ಟರ್ ಕೃಷ್ಣ,ಕನ್ನಡದ ಕಂದ,ವೀರ ಕೇಸರಿ ಸೇರಿದಂತೆ 600 ಸಿನಿಮಾಗಳಲ್ಲಿ ಅಭನಯಸಿ ಕಲಾ ಸೇವೆಯನ್ನ ಮಾಡಿದ್ದಾರೆ.

ಐದು ಸಿನಿಮಾಗಳ ನಿರ್ಮಾಣದ ಜೊತೆಗೆ, ಕನ್ನಡ ಕಂದ, ಕಾಲೇಜು ಹೀರೋ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. 24 ಡೆಸೆಂಬರ್ 1937ರಲ್ಲಿ ಮಂಗಳೂರಿನಲ್ಲಿ ಕಡುಬಡತನದ ಕುಟುಂಬದಲ್ಲಿ ಜನಿಸಿದರು. ಮಂಗಳೂರಿನ ಕಂಕನಾಡಿ ಶಾಲೆಯಲ್ಲಿ ಒಂದನೇ ತರಗತಿಗೆ ಸೇರ್ಪೆಡೆಯಾದರು. ಅಲ್ಲಿ ಎಲ್ಲರೊಂದಿಗೂ ಬೆರೆತು, ಖುಷಿಯಿಂದ ಇರುತ್ತಿದ್ದರು ಆಗಲೇ ಜೀವನದಲ್ಲಿ ಸಾಧಿಸಬೇಕೆಂಬ ಛಲ ಅವರಲ್ಲಿ ಹುಟ್ಟಿತ್ತು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-12-2023)

ಜೀವನವನ್ನು ಬದಲಿಸಿದ್ದು ಚಂದ್ರಲೇಖಾ ಎಂಬ ಸಿನಿಮಾ. ಆ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ತೆರೆಳಿದ್ದರು. ಚಿತ್ರದಲ್ಲಿ ಕನ್ನಡಿಯಿಂದ ಬಂದ ರಾಜಕುಮಾರಿ ಮತ್ತೆ ಕನ್ನಡಿಯೊಳಗೆ ಸೇರುತ್ತಾಳೆ. ಅದು ಹೇಗೆ ಎಂಬ ಕುತೂಹಲ ಮೂಡುತ್ತದೆ . ಹಾಗೆ ಚಿತ್ರಗಳಲ್ಲಿ ಒಳ್ಳೆಯ ಸಂಭಾವನೆ ಸಿಗುತ್ತದೆ ಎಂದು ತಿಳಿದ ಲೀಲಾವತಿ ಚಿತ್ರಾಂಗಕ್ಕೆ ವಾಲುತ್ತಾರೆ .

ಏನಾದರೂ ಸರಿಯೇ ನಾನು ಕಲಾವಿದೆ ಆಗಲೇಬೇಕು ಎಂಬ ಹೆಬ್ಬಯಕೆಯಿಂದ ಮೈಸೂರಿನತ್ತ ಪಯಣ ಬೆಳೆಸುತ್ತಾರೆ.ವಿಠಲಾಚಾರ್ಯ ಎಂಬುವವರನ್ನು ಭೇಟಿಯಾಗಿ ಕಲಾವಿದೆಯಾಗಬೇಕು ಎಂದಾಗ, ಅವರು ನಾಟಕದ ಕಂಪನಿಗೆ ಸೇರುವಂತೆ ಸಲಹೆ ನೀಡುತ್ತಾರೆ. ಆಗ ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿಗೆ ಸೇರುತ್ತಾರೆ. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ ಭಕ್ತ ಪ್ರಹ್ಲಾದ ನಾಟಕದಲ್ಲಿ ತೋರಿದ ನಟನೆ, ಲೀಲಾವತಿ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತು.

ನಾಟಕ ಕಂಪನಿಯಲ್ಲಿ ನಟನೆಯಲ್ಲಿ ಪರಿಣಿತಿ ಪಡೆದ ಲೀಲಾವರಿ ಚಂಚಲ ಕುಮಾರಿ ಚಿತ್ರದಲ್ಲಿ ಸಖಿಯ ಪಾತ್ರದಲ್ಲಿ ನಟಿಸಿದರು. ಎಲ್ಲಿ ಕುಳಿತರೂ ಡೈಲಾಗ್ ಪ್ರಾಕ್ಟಿಸ್ ಮಾಡುತ್ತಿದ್ದರು. ಮಾಂಗಲ್ಯ ಯೋಗ ಚಿತ್ರದಲ್ಲಿ ನಾಯಕಿಯಾಗಿ ಬಣ್ಣಹಚ್ಚಿದರು.

ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್‌ಕುಮಾರ್ ಹಾಗೂ ಲೀಲಾವತಿ ಜೋಡಿ ಕನ್ನಡದ ಎವರ್ ಗ್ರೀನ್ ಜೋಡಿಯಾಗಿದೆ. ರಣಧೀರ ಕಂಠೀರವ ಚಿತ್ರದಿಂದ ಒಂದಾದ ಡಾ.ರಾಜ್ ಹಾಗೂ ಲೀಲಾವತಿ ಮೂವತ್ತಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳಲ್ಲಿ ನಟಿಸಿ ಮನಸೂರೆಗೊಂಡಿದ್ದಾರೆ. ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ. ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಮೂವತ್ತಾರು ಚಿತ್ರಗಳಲ್ಲಿ ನಾಯಕಿಯಾದರು. ಅಂದಿನ ಕಾಲದಲ್ಲಿ ಲೀಲಾವತಿ ಅವರ ಜನಪ್ರಿಯತೆ ಹೇಗಿತ್ತೆಂದರೆ, ನಾಯಕ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು.

ಪುಟ್ಟಣ ಕಣಗಾಲ್, ಅವರ ಗೆಜ್ಜೆ ಪೂಜೆ ಚಿತ್ರದಲ್ಲಿ ಲೀಲಾವತಿ ಅವರು ಮೊದಲ ಬಾರಿಗೆ ಪೋಷಕ ಪಾತ್ರದಲ್ಲಿ ನಟಿಸಿದರು. ಜೀವನಕ್ಕಾಗಿ ಪೋಷಕ ಪಾತ್ರ ಒಪ್ಪಿಕೊಂಡಿದ್ದರು. ಎಪ್ಪತ್ತರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಪೋಷಕ ಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಮುಂತಾದ ಚಿತ್ರಗಳು ಪ್ರಮುಖವಾದವು.

ಲೀಲಾವತಿ ಅವರಿಗೆ ಬಾಲ್ಯದಿಂದಲೂ ಕೃಷಿಯತ್ತ ಅಪಾರ ಒಲವಿತ್ತು. ಶಾಲೆಯಲ್ಲಿ ಓದುವಾಗಲೇ ಕೈತೋಟದ ನಿರ್ವಹಣೆಯ ಜವಾಬ್ದಾರಿಯೂ ಲೀಲಾವತಿ ಅವರದ್ದಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಸಮಯದಲ್ಲಿಯೇ ಚೆನ್ನೈನತ್ತ ತೆರಳಿದ ಲೀಲಾವತಿ ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದರು. ಮದರಾಸಿನಲ್ಲಿ ನೆಲೆಸಿ ಅಲ್ಲಿಯೇ ತೋಟವನ್ನು ಖರೀದಿಸಿದರು. ತಮ್ಮ ತೋಟವನ್ನು ಅತ್ಯದ್ಭುತವಾಗಿ ನಿರ್ವಹಿಸಿದ್ದರು. ದೇಶ ವಿದೇಶಗಳಿಂದಲೂ ಗಿಡಗಳನ್ನು ತರಿಸಿ ನೆಡಿಸಿದ್ದರು.

ನಟನೆಯಿಂದ ದೂರ ಉಳಿದ ಮೇಲೆ ಒಂದೊಂದು ಎಕರೆ ಜಮೀನು ಮಾರಿ ವೇತನ ನೀಡುತ್ತಿದ್ದರು. ಕೆಲಸ ಮಾಡಿದವರಿಗೆ ರುಚಿಯಾದ ಅಡುಗೆ ಮಾಡಿ ಪ್ರೀತಿಯಿಂದ ಬಡಿಸುತ್ತಿದ್ದರು. ಹಳ್ಳಿಯ ಜನಕ್ಕೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಆಸ್ಪತ್ರೆ ಕಟ್ಟಿಸಿದ್ದಾರೆ. ರೈತರನ್ನು ಒಕ್ಕಲೆಬ್ಬಿಸುವಾಗ, ಅದರ ವಿರುದ್ದ ಹೋರಾಟ ಮಾಡಿ ಕೃಷಿ ಜಮೀನಿಗಾಗಿ ಹೋರಾಟ ಮಾಡಿ ಉಳಿಸಿಕೊಟ್ಟರು. ಹೆಣ್ಣು ಅಭಲೆಯಲ್ಲ, ಸಭಲೆ, ಹೆಣ್ಣು ಮನಸು ಮಾಡಿದರೆ ಎಲ್ಲವನ್ನು ಗೆಲ್ಲಬಹುದು, ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಸ್ಫೂತಿಯಾಗಿಟ್ಟುಕೊಂಡು ಬದುಕಿದವರು. ಸೋಲದೇವನಹಳ್ಳಿಯಲ್ಲಿಯೂ ಬದುಕಿ ಗೆದ್ದು ತೋರಿಸಿದವರು.

ಲೀಲಾವತಿ ಅವರು ಬಾಲ್ಯದಲ್ಲಿಯೂ ಒಂಟಿಯಾಗೇ ಬೆಳೆದರೂ ಜೀವನದುದ್ದಕ್ಕೂ ಒಂಟಿಯಾಗಿಯೇ ಜೀವನ ಸಾಗಿಸಿದರು. ತಮ್ಮ ಮಗ ವನೋದ್ ರಾಜ್ ಅವರೇ ಪ್ರಪಂಚ, ಸರ್ವಸ್ವವಾಗಿದ್ದರು. ವಿನೋದ್ ರಾಜ್ ಅವರು ಮೂರು ತಿಂಗ ಮಗುವಾಗಿದ್ದಾಗಲೇ, ಅವರನ್ನು ಜೋಳಿಯಲ್ಲಿ ಮಲಗಿಸಿ, ಬಣ್ಣಹಚ್ಚಿ ನಾಟಕದಲ್ಲಿ ಅಭಿನಯಿಸಲು ತೆರಳುತ್ತಿದ್ದರು. ಹಳ್ಳಿಯ ಕಡೆ ನಾಟಕಕ್ಕೆ ತೆರಳಿದರೆ, ರಾತ್ರಿ ಹತ್ತಕ್ಕೆ ಆರಂಭವಾದ ಮುಂಜಾನೆ ಐದು ಗಂಟೆಗೆಯವರೆಗೂ ಪಾತ್ರದಲ್ಲಿ ತಲ್ಲೀನರಾಗುತ್ತಿದ್ದರಂತೆ.

ಲೀಲಾವತಿ ಅವರ ಅದ್ಭುತ ನಟನೆಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಗೆಜ್ಜೆ ಪೂಜೆ, ತುಂಬಿದ ಕೊಡ, ಸಿಪಾಯಿರಾಮು ಭಕ್ತಕುಂಬಾರ, ಮಹಾತ್ಯಾಗ ಚಿತ್ರಗಳಿಗೆ ಆರು ಬಾರಿ ರಾಜ್ಯ ಪ್ರಶಸ್ತಿಗಳು ಬಂದಿವೆ. ಮದುವೆ ಮಾಡಿ ನೋಡು ಮತ್ತು ಸಂತ ತುಕರಾಮ್ ಚಿತ್ರಗಳ ನಟನೆಗೆ ಎರಡು ರಾಷ್ಟ್ರಪ್ರಶಸ್ತಿಗಳು ಲಭಿಸಿವೆಕನ್ನಡ ಕಂದ ಚಿತ್ರದ ಅಭಿನಯಕ್ಕಾಗಿ ಫಿಲ್ ಫೇರ್ ಪ್ರಶಸ್ತಿ ಕೂಡ ಲಭಿಸಿದೆ.1999 ಜೀವಮಾನ ಸಾಧನೆಗಾಗಿ ಡಾ.ರಾಜ್‌ಕುಮಾರ್ ಪ್ರಶಸ್ತಿ ಪುಟ್ಟ ಗೌರವಿಸಲಾಗಿದೆ.2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡ ಬಂದಿದೆ.

ಎಲ್ಲಾ ಭಾಷೆಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ತೋರಿ ಎಲ್ಲರ ಹೃದಯಗಳನ್ನು ಗೆದ್ದಿರುವ ಈ ಮಿನುಗು ತಾರೆಯ ಆಗಲಿಕೆಗೆ ಕನ್ನಡಿಗರು ಸೇರಿದಂತೆ ಎಲ್ಲಾ ಚಿತ್ರರಂಗದ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ

RELATED ARTICLES

Latest News