ಬೆಂಗಳೂರು,ನ.1- ನಗರದಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಇಂದು ಬೆಳಿಗ್ಗೆ ಪಶು ವೈದ್ಯಾಧಿಕಾರಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಚಿರತೆ ದಾಳಿಯಿಂದ ಗಾಯ ಗೊಂಡಿರುವ ಪಶು ವೈದ್ಯಾಧಿಕಾರಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಶನಿವಾರ ಬೊಮ್ಮನಹಳ್ಳಿಯ ಕೂಡ್ಲುಗೇಟ್ ಸಮೀಪದ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದ ಪಾಳು ಮನೆಯೊಂದರಲ್ಲಿ ಚಿರತೆ ಪತ್ತೆಯಾಗಿದ್ದರಿಂದ ಸ್ಥಳೀಯ ಜನತೆ ಆತಂಕಕ್ಕೆ ಒಳಗಾಗಿದ್ದರು. ಚಿರತೆ ಇದ್ದ ಪಾಳು ಮನೆ ಸುತ್ತಮುತ್ತ ಎರಡು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಪೊದೆ ಬೆಳೆದುಕೊಂಡಿದ್ದರಿಂದ ಅದನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಚಿರತೆ ಓಡಾಡುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ ಚಿರತೆ ಬಹಿರಂಗವಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಬೇಟೆಗಾಗಿ ಹರಸಾಹಸ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಚಿರತೆ ಹುಡುಕಾಟಕ್ಕಾಗಿ ಮೈಸೂರು ಅರಣ್ಯ ಇಲಾಖೆಯ ವಿಶೇಷ ತಂಡವನ್ನು ಕರೆಸಿಕೊಳ್ಳಲಾಗಿತ್ತು.
ಸರ್ಕಾರಿ ಶಾಲೆಗಳಿಗೆ ನೀರು-ವಿದ್ಯುತ್ ಉಚಿತ : ಸಿಎಂ ಘೋಷಣೆ
ವಿಶೇಷ ತಂಡದವರು ಚಿರತೆ ಪತ್ತೆಗಾಗಿ ಥರ್ಮಲ್ ಇಮೇಜ್ ಡ್ರೋಣ್ ಕ್ಯಾಮರಾ ಬಳಕೆ ಮಾಡಿ ಶೋಧ ನಡೆಸಿದ್ದರೂ ಚಿರತೆ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ, ಇಂದು ಬೆಳಿಗ್ಗೆ 10.30 ರ ಸಮಯದಲ್ಲಿ ಪಾಳು ಮನೆಯ ಪೊದೆ ಸಮೀಪ ಚಿರತೆ ದಿಢೀರ್ ಕಾಣಿಸಿಕೊಂಡಿತ್ತು. ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯವರು ಚಿರತೆಗೆ ಸ್ಪ್ರೇ ಮತ್ತು ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾದರು.
ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾದ ಪಶು ವೈದ್ಯಾಧಿಕಾರಿ ಹಾಗೂ ಅವರ ಜತೆಗಿದ್ದ ಅರಣ್ಯ ಸಿಬ್ಬಂದಿ ಮೇಲೆ ಚಿರತೆ ದಾಳಿ ನಡೆಸಿ ಪರಾರಿಯಾಗಿದೆ. ತಕ್ಷಣ ಉಳಿದ ಸಿಬ್ಬಂದಿಗಳು ಚಿರತೆ ದಾಳಿಯಿಂದ ಗಾಯಗೊಂಡಿದ್ದ ಪಶುವೈದ್ಯಾಧಿಕಾರಿ ಮತ್ತು ಅರಣ್ಯ ಸಿಬ್ಬಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ದಾಳಿಯ ನಂತರ ಮತ್ತೆ ಪೊದೆಯಲ್ಲಿ ಕಣ್ಮರೆಯಾಗಿರುವ ಚಿರತೆ ಬಂಧನಕ್ಕಾಗಿ 100ಕ್ಕೂ ಹೆಚ್ಚು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ಹುಡುಕಾಟ ಮುಂದುವರೆಸಿದ್ದಾರೆ.