ದಾಬಸ್‌ಪೇಟೆ,ನ.26– ಸೋಂಪುರ ಹೋಬಳಿಯ ಕಂಬಾಳು, ಗೊಲ್ಲರಹಟ್ಟಿ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಸುಮಾರು ಮೂರು ವರ್ಷದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಒಂದು ವಾರದ ಹಿಂದೆ ಕಂಬಾಳು ಗೊಲ್ಲರಹಟ್ಟಿಯ ಕರಿಯಮ ಎಂಬುವರ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಭಯಭೀತಗೊಂಡಿದ್ದು, ಜಮೀನು ಹಾಗೂ ತೋಟಗಳತ್ತ ತೆರಳಲು ಹೆದರುವಂತಹ ವಾತಾವರಣ ನಿರ್ಮಾಣವಾಗಿತ್ತು.
ಚಿರತೆ ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ದಕ್ಷಿಣಕಾಶಿ ಶಿವಗಂಗೆಯ ಬೆಟ್ಟದ ತೆಪ್ಪಲಿನಲ್ಲಿರುವ ಮುದ್ದಿರೇಶ್ವರ ದೇವಾಲಯ ಬಳಿಯ ಗಂಜಿಕಟ್ಟೆ ಬಳಿ ಬೋನನ್ನಿಟ್ಟು ಚಿರತೆ ಸೆರೆಗಾಗಿ ಸಿಬ್ಬಂದಿಗಳು ಕಾದು ಕುಳಿತಿದ್ದರು. ನಿನ್ನೆ ಬೆಳಿಗ್ಗೆ ಆಹಾರ ಅರಸಿ ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಸುಮಾರು 60-70 ಸಿಬ್ಬಂದಿಗಳು ಕಳೆದ ಒಂದು ವಾರದಿಂದ ನಿರಂತರವಾಗಿ ಕಾರ್ಯಚರಣೆ ನಡೆಸಿದ್ದು ಅಂತಿಮವಾಗಿ ಸಫಲವಾಗಿದೆ.
ಸೆರೆಯಾದ ಚಿರತೆಯನ್ನು ಬನ್ನೇರುಘಟ್ಟದ ಪಶು ವೈದ್ಯರು ಅರವಳಿಕೆ ಮದ್ದು ನೀಡಿದ ನಂತರ ಸುರಕ್ಷಿತವಾಗಿ ಜೈವಿಕ ಉದ್ಯಾನವನಕ್ಕೆ ಸಾಗಿಸಲಾಯಿತು.