Friday, October 4, 2024
Homeರಾಜ್ಯನನ್ನ ಪ್ರಶ್ನೆಗಳಿಗೆ ಚಂದ್ರಶೇಖರ್ ಉತ್ತರಿಸಲಿ : ಎಚ್ಡಿಕೆ ಗರಂ

ನನ್ನ ಪ್ರಶ್ನೆಗಳಿಗೆ ಚಂದ್ರಶೇಖರ್ ಉತ್ತರಿಸಲಿ : ಎಚ್ಡಿಕೆ ಗರಂ

Kumaraswamy-Vs-Chandrashekh

ಬೆಂಗಳೂರು,ಸೆ.29- ಐಪಿಎಸ್ ಅಧಿಕಾರಿ ಚಂದ್ರ ಶೇಖರ್ ಒಬ್ಬ ಬ್ಲ್ಯಾಕ್ ಮೇಲರ್, ಕ್ರಿಮಿನಲ್ ಎಂದು ಮತ್ತೆ ಆರೋಪಿಸಿದ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ನಾನು ಕೇಳಿರುವ ಪ್ರಶ್ನೆಗಳಿಗೆ ಈ ಅಧಿಕಾರಿ ಉತ್ತರ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಈ ಅಧಿಕಾರಿ ತನ್ನ ಸಹೋದ್ಯೊ ೕಗಿಗಳಿಗೆ ಬರೆದಿರುವ ಪತ್ರವನ್ನು ಚೆನ್ನಾಗಿ ತಯಾರು ಮಾಡಿದ್ದಾರೆ. ಆ ಪತ್ರವನ್ನು ಯಾರು? ಎಲ್ಲಿ? ತಯಾರು ಮಾಡಿಕೊಟ್ಟರು ಎನ್ನುವುದು ನನಗೂ ಚೆನ್ನಾಗಿ ಗೊತ್ತಿದೆ. ಉತ್ತರ ಕೊಡುವ ಜಾಗದಲ್ಲಿ, ಯಾವ ಸಂದರ್ಭದಲ್ಲಿ ಇದಕ್ಕೆ ಸರಿಯಾದ ಉತ್ತರ ಕೋಡಬೇಕೋ, ಕೊಡುತ್ತೇನೆ ಎಂದು ಅವರು ಹೇಳಿದರು.

ಅಧಿಕಾರಿ ಹೇಳಿರುವಂತೆ ನಾನು ಪ್ರಕರಣದಲ್ಲಿ ಆರೋಪಿ ಇರಬಹುದು. ಆದರೆ, ಅವರು ಅಧಿಕಾರಿ ಸೋಗಿ ನಲ್ಲಿರುವ ಕ್ರಿಮಿನಲ್. ಅವರ ವಿರುದ್ಧ ಸರಣಿ ಅಪರಾಧ ಕೃತ್ಯಗಳನ್ನು ಎಸಗಿರುವ ಆರೋಪಗಳಿವೆ ಎಂದು ಸಚಿವರು ಕಿಡಿಕಾರಿದರು.ಲೋಕಾಯುಕ್ತರಿಗೆ ರಾಜ್ಯಪಾಲರು ಬರೆದ ಪತ್ರವು ಸರ್ಕಾರಿ ಪ್ರಾಯೋಜಿತ ಒಂದು ನಿರ್ದಿಷ್ಟ ಸುದ್ದಿ ವಾಹಿನಿಗೆ ಸೋರಿಕೆ ಆಗಿತ್ತು. ಅದನ್ನು ಸೋರಿಕೆ ಮಾಡಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ.

ಆದರೆ, ಅದು ರಾಜಭವನದಿಂದಲೇ ಸೋರಿಕೆ ಆಗಿರಬೇಕೆಂದು ಕಥೆ ಕಟ್ಟಿ, ರಾಜಭವನ ಸಿಬ್ಬಂದಿಯನ್ನೇ ತನಿಖೆ ಮಾಡಬೇಕು, ಅನುಮತಿ ಕೊಡಿ ಎಂದು ಅಧಿಕಾರಿ ಚಂದ್ರಶೇಖರ್ ತನ್ನ ಉನ್ನತ ಅಧಿಕಾರಿಗೆ ಪತ್ರ ಬರೆದಿದ್ದರು. ಹೀಗಾಗಿ ಆ ಅಧಿಕಾರಿಯ ದರ್ಪ ಹಾಗೂ ಆತನ ಹಿನ್ನೆಲೆಯ ಬಗ್ಗೆ ನಾನು ದಾಖಲೆಗಳ ಸಮೇತ ಮಾತನಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲಿಗೆ ಕ್ರಿಮಿನಲ್ ಮನಃಸ್ಥಿತಿಯ ಕೊಳಕು ಭಾಷೆಯನ್ನು ಬಳಸಿ, ಒಬ್ಬ ಕೇಂದ್ರ ಸಚಿವರ ಬಗ್ಗೆ ಕೆಟ್ಟದ್ದಾಗಿ ಪತ್ರದಲ್ಲಿ ಪದ ಬಳಕೆ ಮಾಡಿದ್ದಾರೆ. ಇದಕ್ಕೆ ಏನು ಮಾಡಬೇಕು? ಎಲ್ಲಿ ಉತ್ತರ ಕೊಡಬೇಕು? ಎನ್ನುವುದು ನನಗೆ ಗೊತ್ತಿದೆ ಎಂದು ಅವರು ತಿಳಿಸಿದರು.

ನಾನು ದಾಖಲೆ, ವಿಷಯ ಇಲ್ಲದೆ ಮಾತನಾಡುವುದಿಲ್ಲ. ಅಧಿಕಾರಿ ಬರೆದಿರುವ ಪತ್ರವನ್ನು ಚೆನ್ನಾಗಿ ಸಿದ್ಧ ಮಾಡಿಕೊಟ್ಟಿದ್ದಾರೆ. ನಾನು ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿ ಮಾಡಿದ ಮೇಲೆ, ಸಂಜೆ ಆ ಅಧಿಕಾರಿ ಎಲ್ಲಿ ಹೋಗಿದ್ದರು ಎನ್ನುವುದು ಗೊತ್ತಿದೆ. ಅವರ ಪತ್ರವನ್ನು ಅಲ್ಲಿ ಯಾವ ಕಾನೂನು ಪಂಡಿತರು ಸಿದ್ಧ ಮಾಡಿಕೊಟ್ಟರು. ಅವರೊಂದಿಗೆ ಇನ್ನೊಬ್ಬರು ಯಾರಿದ್ದರು ಎನ್ನುವುದು ನನಗೆ ಗೊತ್ತಿದೆ ಎಂದು ಅವರು ಹೇಳಿದರು.

ನಾನು ದಾಖಲೆ ಇಟ್ಕೊಂಡೇ ನಿನ್ನೆ ಮಾತಾಡಿದ್ದೇನೆ. ಅಧಿಕಾರಿ ಆಂಧ್ರ ಪ್ರದೇಶ ಮೂಲದವರು. ಹಿಮಾಚಲ ಪ್ರದೇಶದ ಕೇಡರ್ ಅಧಿಕಾರಿ 25 ವರ್ಷಗಳಿಂದ ಇಲ್ಲಿದ್ದಾರೆ. ಯಾರು ಯಾರನ್ನು ಹಿಡಿದು ಇಲ್ಲಿಗೆ ಬಂದಿದ್ದೀರಿ? ಅಧಿಕಾರಿ ಬಳಕೆ ಮಾಡಿರುವ ಭಾಷೆಯು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಯಾರು ಯಾರ ಜತೆ ಈತನ ಕ್ರಿಮಿನಲ್ ನಂಟಿದೆ ಎನ್ನುವುದನ್ನು ನಿನ್ನೆಯೇ ದಾಖಲೆ ಸಮೇತ ಹೇಳಿದ್ದೇನೆ.

ಒಬ್ಬ ಕೇಂದ್ರ ಮಂತ್ರಿ ಬಗ್ಗೆ ಯಾವ ಭಾಷೆ ಬಳಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ ಎಂದು ಅವರು ಹೇಳಿದರು.ಪತ್ರದಲ್ಲಿ ಸತ್ಯಮೇವ ಜಯತೆ ಎಂದು ಅಧಿಕಾರಿ ಬರೆದಿದ್ದಾರೆ. ನಾನು ಹೋರಾಟ ಮಾಡುತ್ತಿರುವುದು ಕೂಡ ಅದೇ ಉದ್ದೇಶಕ್ಕೆ. ಅಷ್ಟು ದಾಖಲೆಗಳ ಸಮೇತ ಈ ವ್ಯಕ್ತಿ ಬಗ್ಗೆ ಹೇಳಿದ್ದು ಕೂಡ ಸತ್ಯಮೇವ ಜಯತೆ ಕಾರಣಕ್ಕಾಗಿಯೇ ಎಂದು ಕುಮಾರಸ್ವಾಮಿ ತಿಳಿಸಿದರು.

ಪೊಲೀಸ್ ಠಾಣೆಗೆ ಈ ಅಧಿಕಾರಿ ವಿರುದ್ಧ ನಾನು ದೂರು ಕೊಟ್ಟಿದ್ದೇನೆಯೇ? ಅವರ ಕೈಕೆಳಗೆ ಕೆಲಸ ಮಾಡುವ ಇನ್‌್ಸಪೆಕ್ಟರ್ಗೆ 20 ಕೋಟಿ ರೂ. ಬೇಡಿಕೆ ಇಟ್ಟು ಸಿಕ್ಕಿ ಬಿದ್ದಿದ್ದಾರೆ. ಆ ಇನ್‌್ಸಪೆಕ್ಟರ್ ಈ ಅಧಿಕಾರಿ ವಿರುದ್ಧ ದೂರು ನೀಡಿದ್ದಾರೆ. ತಕ್ಷಣ 2 ಕೋಟಿ ರೂ.ತಂದು ಕೊಡಬೇಕು ಎಂದು ಬ್ಲಾಕ್ ಮೇಲ್ ಮಾಡಿದ್ದು ಈತನೇ ಅಲ್ಲವೇ? ನಂತರ ಕೇಸ್ ಕೋರ್ಟ್ ಮುಂದೆ ಇದೆಯಲ್ಲವೇ? ಇದೇನಾ ಅಧಿಕಾರಿಯ ಸತ್ಯಮೇವ ಜಯತೆ? ಎಂದು ಸಚಿವರು ಕಿಡಿಕಾರಿದರು.

ನನ್ನ ರಾಜೀನಾಮೆ ಕೇಳುವ ನೈತಿಕತೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪಟಾಲಂಗೆ ನನ್ನ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ನಾನು ರಾಜೀನಾಮೆ ಕೊಡಬೇಕೇ? ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಿಲ್ಲ ಅಂದ ಮೇಲೆ ರಾಜೀನಾಮೆ ಯಾಕೆ ಕೊಡಲಿ? ಸುಳ್ಳು ಹೇಳುತ್ತಿರುವುದು ನಾನಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

RELATED ARTICLES

Latest News