Tuesday, August 12, 2025
Homeರಾಜ್ಯಗ್ರಂಥಾಲಯಗಳನ್ನು ಬಲಪಡಿಸುವ ಅಗತ್ಯವಿದೆ : ಸಚಿವ ಮಧು ಬಂಗಾರಪ್ಪ

ಗ್ರಂಥಾಲಯಗಳನ್ನು ಬಲಪಡಿಸುವ ಅಗತ್ಯವಿದೆ : ಸಚಿವ ಮಧು ಬಂಗಾರಪ್ಪ

Libraries need to be strengthened: Minister S. Madhu Bangarappa

ಬೆಂಗಳೂರು, ಆ.12-ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಹೆಚ್ಚಿನ ಸಂಪನ್ಮೂಲಗಳನ್ನು ಹೊಂದುವಂತೆ ಗ್ರಂಥಾಲಯಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.

ಭಾರತದ ಗ್ರಂಥಾಲಯ ವಿಜ್ಞಾನ ಪಿತಾಮಹರಾದ ಡಾ. ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಗ್ರಂಥಪಾಲಕರ ದಿನಾಚರಣೆಯಲ್ಲಿ ಗ್ರಂಥಪಾಲಕಾರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ನಾನು ಮಂತ್ರಿಯಾದ ನಂತರ ಮೂರನೇ ಬಾರಿಗೆ ಗ್ರಂಥಪಾಲಕರ ದಿನವನ್ನು ಆಚರಿಸುತ್ತಿದ್ದೇನೆ. ಕಳೆದ ವರ್ಷ ತುಮಕೂರಿನಲ್ಲಿ ನಾವು ಬಹಳ ವಿಜೃಂಭಣೆಯಿಂದ ಆಚರಿಸಿದ್ದೆವು. ಇಂದು ಗ್ರಂಥಾಲಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾ. ಎಸ್.ಆರ್. ರಂಗನಾಥನ್ ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಹಾಗೂ ಅವರಂತೆಯೇ ಅಸಂಖ್ಯಾತ ಗ್ರಂಥಪಾಲಕರ ಶ್ರಮದಿಂದ ಇಂದು ಕರ್ನಾಟಕದಲ್ಲಿ 2500ಕ್ಕೂ ಹೆಚ್ಚಿನ ಗ್ರಂಥಾಲಯಗಳಿರುವುದು ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು.

ರಾಜ್ಯದ ಹಲವಾರು ಗ್ರಂಥಾಲಯಗಳಿಗೆ ಭೇಟಿ ನೀಡಿದ ಅನುಭವವನ್ನು ಹಂಚಿಕೊಂಡ ಸಚಿವರು, ದುಬಾರಿ ತರಬೇತಿ ಕೇಂದ್ರಗಳಿಗೆ ಹೋಗಲು ಸಾಧ್ಯವಿಲ್ಲದ ವಿದ್ಯಾರ್ಥಿಗಳು ದಿನವಿಡೀ ಗ್ರಂಥಾಲಯಗಳಲ್ಲಿ ಓದುತ್ತಾರೆ ಎಂದು ತಿಳಿಸಿದರು.

ಇದರಿಂದಲೇ ಸರ್ಕಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಜೆಇಇ ಹಾಗೂ ಎಇಇಟಿ ತರಬೇತಿ ಯೋಜನೆಯನ್ನು ಆರಂಭಿಸುವ ಪ್ರೇರಣೆ ದೊರೆಯಿತು. ಪ್ರಸ್ತುತ 25,000 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಕರ್ನಾಟಕವು ಇಂತಹ ಸೌಲಭ್ಯ ಒದಗಿಸುವ ಏಕೈಕ ರಾಜ್ಯವಾಗಿದೆ. ಇಂತಹ ಸೌಲಭ್ಯದಿಂದ ಗೌರಿಬಿದನೂರಿನ ಎನ್. ಸಂಕೇತ್ ರಾಜ್ ಐಐಟಿ ಪ್ರವೇಶ ಪಡೆದಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರಿ ಪಿಯುಸಿ ವಿದ್ಯಾರ್ಥಿಗಳೆಲ್ಲರಿಗೂ ಉಚಿತ ತರಬೇತಿ ವಿಸ್ತರಿಸುವ ಉದ್ದೇಶವಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಹೆಚ್ಚಿಸಲು, ಬೇಕಾದ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರ ಬಗ್ಗೆ ಒತ್ತು ನೀಡಬೇಕು ಎಂದರು.

ಪ್ರತಿ ಗ್ರಂಥಪಾಲಕರೂ ಒಂದು ವಿಶ್ವವಿದ್ಯಾಲಯದ ಮುಖ್ಯಸ್ಥರಿದ್ದಂತೆ. ಗ್ರಂಥಾಲಯ ಬಲಪಡಿಸುವಲ್ಲಿ ಸವಾಲುಗಳಿದ್ದರೂ ನಮ್ಮ ಸರ್ಕಾರ ಅದನ್ನು ಬಲಪಡಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ನಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರಿಗೆ ಬಹಳ ಓದುವ ಹವ್ಯಾಸವಿತ್ತು ಎಂದು ಹಂಚಿಕೊಂಡರು.

ಶಿಕ್ಷಣ ಇಲಾಖೆಯ ಸುಧಾರಣೆಗಳ ಕುರಿತು ಮಾತನಾಡಿದ ಅವರು, ಮೂರು ಪರೀಕ್ಷಾ ಪದ್ಧತಿ ಹಾಗೂ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಗೆ ವೆಬ್‌ಕಾಸ್ಟಿಂಗ್‌ ಮತ್ತು ಶಿಕ್ಷಣ ಇಲಾಖೆಯ ಇನ್ನೂ ಹಲವು ನೂತನ ಕ್ರಮಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಕರಿಗೌಡ ಬೀಚನಹಳ್ಳಿ, ಗ್ರಂಥಾಲಯ ಮುಖ್ಯಸ್ಥ ಡಾ. ಬಿ. ಎಸ್. ಶಿವರಾಮ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಬಸವರಾಜೇಂದ್ರ ಹೆಚ್. ಉಪಸ್ಥಿತರಿದ್ದರು.

RELATED ARTICLES

Latest News