ಕನಕಪುರ , ಏ.10- ತಮಿಳುನಾಡು ಗಡಿ ಭಾಗದ ಹುಣಸನಹಳ್ಳಿ ಗ್ರಾಮವನ್ನೇ ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣದ ನ್ಯಾಯಾಲಯ ತೀರ್ಪು ಪ್ರಕಟವಾಗಿ 16 ಮಂದಿ ಆರೋಪಿಗಳ ವಿರುದ್ಧ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿದೆ.
ನಗರದ ಜೆ.ಎಂ.ಎ್.ಸಿ ಕೋರ್ಟ್‌ನ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಎಚ್.ಎನ್.ಕುಮಾರ್ ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ಕೊಲೆಗೈದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಘಟನೆ ವಿವರ:
ತಾಲ್ಲೂಕಿನ ಕೋಡಿಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ಹುಣಸನಹಳ್ಳಿ ಗ್ರಾಮದ ಕಿಟ್ಟು ಬಾರ್ ಬಳಿ ಹಾಡುಹಗಲೇ ಸಾರ್ವಜನಿಕ ಸ್ಥಳದಲ್ಲಿ 2021ನೇ ಆಗಸ್ಟ್ 28 ರಂದು ತಮಿಳುನಾಡು ಕೃಷ್ಣಗಿರಿ ಜಿಲ್ಲೆ ಹುಲಿಬಂಡೆ ಗ್ರಾಮದ ಶಂಕರ್(30) ಎಂಬಾತನನ್ನು ಸಿನಿಮೀಯ ರೀತಿಯಲ್ಲಿ ಮಾರಕಾಸಗಳಿಂದ ಮುಖ ಸೇರಿದಂತೆ ಹಲವೆಡೆ ಕೊಚ್ಚಿ ವಿರೂಪಗೊಳಿಸಿ ಕೊಲೆ ಮಾಡಲಾಗಿತ್ತು, ಈ ಪ್ರಕರಣ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸುವಂತೆ ಮಾಡಿತ್ತು.
ಕೃಷ್ಣಗಿರಿ ಜಿಲ್ಲೆ ಅಂಚೆಟ್ಟಿ ತಾಲ್ಲೂಕು ಹುಲಿಬಂಡೆ ಗ್ರಾಮದ ಮೂಲ ಚಿನ್ನಸ್ವಾಮಿ ಎಂಬಾತನಿಗೆ ಇಬ್ಬರು ಪತ್ನಿಯರಿದ್ದು, ಜಮೀನುದಾರನಾದ ಚಿನ್ನಸ್ವಾಮಿ ತನ್ನ 26 ಎಕರೆಯಲ್ಲಿ 20 ಎಕರೆ ಜಮೀನು ಮಾರಾಟ ಮಾಡಿದ್ದ, ಉಳಿದ ಜಮೀನಿಗೆ ಎರಡೂ ಕುಟುಂಬದ ಇಬ್ಬರು ಪತ್ನಿಯರ ಮಕ್ಕಳಿಗೆ ಜಮೀನಿನ ವಿಚಾರದಲ್ಲಿ ಕಲಹ ಉಂಟಾಗಿತ್ತು, ಮೊದಲನೇ ಪತ್ನಿಯ ಪುತ್ರ ಓದೇಗೌಡ ಹಾಗೂ ಎರಡನೇ ಪತ್ನಿ ನೀಲಮನ ಮಕ್ಕಳಾದ ಮಾದೇಶ ಮತ್ತು ಚನ್ನಕೃಷ್ಣರ ನಡುವೆ ಜಮೀನು ವಿವಾದ ತಾರಕಕ್ಕೆ ಏರಿ 2015ರಲ್ಲಿ ಎರಡನೇ ಪತ್ನಿಯ ಮಗ ಚನ್ನಕೃಷ್ಣ ತನ್ನ ಸೋದರ ಓದೇಗೌಡನಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ, ಆ ವೇಳೆ ಓದೇಗೌಡ ಪ್ರಾಣಾಪಾಯದಿಂದ ಪಾರಾಗಿದ್ದ.
ಈ ಕಲಹ ಎರಡು ಕುಟುಂಬಗಳ ನಡುವೆ ದ್ವೇಷ ಹೆಚ್ಚಾಗಿ ಸೇಡು ತೀರಿಸಿಕೊಳ್ಳಲು, ಚನ್ನಕೃಷ್ಣನ ಮೇಲಿನ ದ್ವೇಷದ ಹಿನ್ನೆಲಯಲ್ಲಿ ಪಟ್ಟಾಭಿ ಎಂಬಾತನ ಜೊತೆ ಸೇರಿ ಓದೇಗೌಡನನ್ನು ಕೊಲೆ ಮಾಡಲಾಗಿತ್ತು, ಈ ಕೊಲೆಯ ಹಿನ್ನಲೆಯಲ್ಲಿ ಚನ್ನಕೃಷ್ಣನ ವಿರುದ್ಧ ದಾಯಾದಿ ಮಕ್ಕಳು ರೊಚ್ಚಿಗೆದ್ದು 2021ರಲ್ಲಿ ಸ್ವಗ್ರಾಮ ಹುಲಿಬಂಡೆ ಗ್ರಾಮದಲ್ಲಿ ಚನ್ನಕೃಷ್ಣ ಅಂದಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಟ್ರ್ಯಾಕ್ಟರ್‌ನಿಂದ ಗುದ್ದಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು, ಅಂದು ಚನ್ನಕೃಷ್ಣನ ಅಂತ್ಯಕ್ರಿಯೆ ವೇಳೆ ಚನ್ನಕೃಷ್ಣನ ಅನುಯಾಯಿಗಳು ಪ್ರತೀಕಾರವಾಗಿ ಇದೇ ಮಾದರಿಯಲ್ಲಿ ಆರೋಪಿಗಳನ್ನು ಕೊಲೆಗೈಯ್ಯಲು ಪ್ರತಿಜ್ಞೆ ಮಾಡಿದ್ದರು.
ಚನ್ನಕೃಷ್ಣ ಕೊಲೆಯಾದ ಕೆಲವೇ ತಿಂಗಳಲ್ಲಿ ಓದೇಗೌಡನ ಮೊದಲ ಪತ್ನಿಯ ಮಗ ಶಂಕರನ ಕೊಲೆಗೆ ಸಂಚು ರೂಪಿಸಿ ಆತನ ಚಲನವಲನಗಳ ಮೇಲೆ ನಿಗಾ ವಹಿಸಿದ್ದ ಆರೋಪಿಗಳಾದ ಮಾದೇವ, ಶಿವಕುಮಾರ್, ಲೋಕೇಶ್, ಕಾರ್ತಿಕ್, ವೇಣುಗೋಪಾಲ್ ಬರ್ಬರವಾಗಿ ಶಂಕರನ ಹತ್ಯೆಗೈದಿದ್ದರು.
ಈ ಸಂಬಂಧ ಕೋಡಿಹಳ್ಳಿ ಸಬ್‌ಇನ್‌ಸ್ಪೆಕ್ಟರ್ ಅನಂತ್‌ರಾಮ್, ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಟಿ.ಕೃಷ, ತನಿಖಾ ಸಹಾಯಕ ಮೋಹನ್ ಪ್ರಕರಣ ದಾಖಲಿಸಿಕೊಂಡು ಕೆಲ ಹೊತ್ತಿನಲ್ಲಿಯೇ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು. ಉಳಿದ ಆರೋಪಿಗಳನ್ನು ಕೆಲ ದಿನಗಳಲ್ಲಿಯೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಐದು ಮಂದಿ ಪ್ರಮುಖ ಆರೋಪಿಗಳ ಜೊತೆ ಬಂಡೇಮಾದೇಶ, ಮುನಿಸ್ವಾಮಿ, ಮಮತಾ, ದೀಪಕ್ ರಾಜ್, ರಾಮಚಂದ್ರ, ಗುರ್ರಪ್ಪ, ರಘು ಅಲಿಯಾಸ್ ಸೂರಿಗೋಪಾಲ, ವೆಂಕಟೇಶ್ ಎಂಬುವವರ ಕೊಲೆಗೆ ಸಹಕಾರ ನೀಡಿದ ಹಾಗೂ ದಶರಥ, ಹರೀಶ್, ಸುರೇಶ್, ವಿನಯಪ್ರಸಾದ್ ಎಂಬುವವರು ಕೊಲೆಗೆ ಒಳಸಂಚು ರೂಪಿಸಿದ ಆರೋಪದ ಹಿನ್ನಲೆಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.
ಕಳೆದ ಮೂರುವರೆ ವರ್ಷಗಳಿಂದ ಪ್ರಕರಣದ ವಿಚಾರಣೆಯಲ್ಲಿ ಎಸ್‌ಎ್‌ಎಲ್ ತಜ್ಞ ಶರಣಬಸಪ್ಪನವರ ಸಿಸಿ ಕ್ಯಾಮೆರಾ ದೃಶ್ಯಾವಳಿ, ಸಾಕ್ಷಿದಾರರ ಸಮಕ್ಷಮ ಸರ್ಕಾರಿ ಅಭಿಯೋಜಕಿ ಎಂ.ಕೆ.ರೂಪಲಕ್ಷಿ ಆರೋಪಿಗಳ ವಿರುದ್ಧ ತಮ ವಾದ ಮಂಡಿಸಿದ್ದರು. ನ್ಯಾಯಾಧೀಶ ಎಚ್.ಎನ್.ಕುಮಾರ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದರು.