Sunday, May 19, 2024
Homeರಾಜ್ಯರೇವಣ್ಣ ವಿರುದ್ಧ ದೂರು ಕೊಡಿಸಿದ್ದು ಕೆ.ಆರ್‌.ನಗರ ಶಾಸಕ : ಲಿಂಗೇಶ್‌ ಗಂಭೀರ ಆರೋಪ

ರೇವಣ್ಣ ವಿರುದ್ಧ ದೂರು ಕೊಡಿಸಿದ್ದು ಕೆ.ಆರ್‌.ನಗರ ಶಾಸಕ : ಲಿಂಗೇಶ್‌ ಗಂಭೀರ ಆರೋಪ

ಹಾಸನ,ಮೇ 6- ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ವಿರುದ್ಧ ಮಹಿಳೆ ಅಪಹರಣದ ದೂರನ್ನು ಕೆ.ಆರ್‌.ನಗರ ಶಾಸಕರು ಕೊಡಿಸಿದ್ದಾರೆ ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್‌.ಲಿಂಗೇಶ್‌ ಗಂಭೀರ ಆರೋಪ ಮಾಡಿದ್ದಾರೆ.

ಕೆ.ಆರ್‌.ನಗರದ ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರ ವಿರುದ್ಧ ದೂರು ದಾಖಲಾಗುವುದರ ಹಿಂದೆ ಅಲ್ಲಿನ ಶಾಸಕರ ಪಾತ್ರವಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿನ ಅಶ್ಲೀಲ ಪೆನ್‌ಡ್ರೈವ್‌ ವಿಚಾರದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ.

ಆದರೆ ಎಸ್‌ಐಟಿ ಪೆನ್‌ಡ್ರೈವ್‌ ಹಂಚಿದವರ ಬಗ್ಗೆ ತನಿಖೆ ಮಾಡದೇ ದಿಕ್ಕು ತಪ್ಪಿರುವಂತೆ ಕಾಣುತ್ತಿದೆ ಎಂದು ಆಪಾದಿಸಿದರು. ರೇವಣ್ಣ ಹಣಿಯಲು ಎಸ್‌ಐಟಿ ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು, ರೇವಣ್ಣ ಅವರ ಮೇಲೆ ಮೊದಲು ಮಹಿಳೆಯೊಬ್ಬರಿಂದ ದೂರು ದಾಖಲಾಯಿತು. ಆ ಮಹಿಳೆಯಿಂದ ದೂರು ಕೊಡಿಸಿದವರು ಯಾರು? ಬಳಿಕ ಅಪಹರಣದ ಪ್ರಕರಣ ದಾಖಲಾಗಿದೆ ಎಂದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮನೆಯಲ್ಲಿ ರೇವಣ್ಣ ಅವರು ಅವಿತುಕೊಂಡಿರಲಿಲ್ಲ. ರೇವಣ್ಣ ಅವರಿಗೆ ತಂದೆ ತಾಯಿ ಎಂದರೆ ದೇವರಷ್ಟೇ ಗೌರವ. ಹಾಗಾಗಿ ದೇವೇಗೌಡರ ಆರೋಗ್ಯ ವಿಚಾರಿಸಲು ಹೋಗಿದ್ದರು. ಅವರನ್ನು ಬಂಧಿಸದೇ ವಿಚಾರಣೆ ಮಾಡಬಹುದಿತ್ತು, ತನಿಖೆಗೆ ಅವರು ಸಹಕಾರ ಕೊಡುತ್ತಿದ್ದರು, ರಾಜಕೀಯ ದುರುದ್ದೇಶದಿಂದ, ಹತಾಶ ಮನೋಭಾವದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಗುಂಡಿಗೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವ ರೀತಿಯಲ್ಲಿ ದೇವೇಗೌಡರ ಕುಟುಂಬವನ್ನು ಮುಗಿಸುವ ಹುನ್ನಾರ ಮಾಡಿದ್ದಾರೆ. ಆದರೆ ಅದು ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ ಎಂದರು.

ತಪ್ಪು ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡು ಇದ್ದರೂ ಅವರ ವಿರುದ್ಧ ಧ್ವನಿ ಎತ್ತುವವರೇ ಇಲ್ಲ. ಪೆನ್‌ಡ್ರೈವ್‌ ಪ್ರಕರಣದ ಬಳಿಕ ಜೆಡಿಎಸ್‌ನ ಕಾರ್ಯಕರ್ತರು ಸಾಕಷ್ಟು ನೊಂದಿದ್ದಾರೆ ಎಂದ ಅವರು, ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎಸ್ಪಿಯವರಲ್ಲಿ ಮನವಿ ಮಾಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.ಶಾಸಕ ಸಿ.ಎನ್‌.ಬಾಲಕೃಷ್ಣ ಸೇರಿದಂತೆ ಪಕ್ಷದ ಹಲವು ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News