Friday, November 22, 2024
Homeರಾಜ್ಯಲೋಕಸಭೆ ಚುನಾವಣೆ : 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್

ಲೋಕಸಭೆ ಚುನಾವಣೆ : 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್

ಬೆಂಗಳೂರು,ಜ.9- ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಎಚ್ಚೆತ್ತುಕೊಂಡಿರುವ ಬಿಜೆಪಿ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಿಂಗಳ ಅಂತ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಮುಂದಾಗಿದೆ.

ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಹಾಲಿ ಸದಸ್ಯರೂ ಸೇರಿದಂತೆ ಆಕಾಂಕ್ಷಿಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ಬಿಜೆಪಿ ಕೇಂದ್ರಚುನಾವಣಾ ಸಮಿತಿ ರಾಜ್ಯ ಘಟಕಕ್ಕೆ ಸೂಚನೆ ಕೊಟ್ಟಿದೆ. ಹೀಗಾಗಿ ಈ ತಿಂಗಳ ಅಂತ್ಯಕ್ಕೆ ದೆಹಲಿಗೆ ಸಂಭವನೀಯ ಪಟ್ಟಿ ರವಾನೆಯಾಗಲಿದೆ ಎಂದು ತಿಳಿದುಬಂದಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿಯ ಚುನಾವಣೆಯಲ್ಲಿ ಕೆಲವು ಸದಸ್ಯರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದೆ.

ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ವಯಸ್ಸಿನ ಕಾರಣದಿಂದ ಕೆಲವು ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿರುವುದರಿಂದ ಒಂದೊಂದು ಕ್ಷೇತ್ರಕ್ಕೆ 5 ಕ್ಕೂ ಹೆಚ್ಚು ಸಂಭವನೀಯರ ಪಟ್ಟಿಯನ್ನು ಕಳುಹಿಸುವ ನಿರೀಕ್ಷೆಯಿದೆ.

ಚಿಕ್ಕಬಳ್ಳಾಪುರದಲ್ಲಿ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಈ ಕ್ಷೇತ್ರಕ್ಕೆ ಬಿಜೆಪಿ ಹೊಸ ಅಭ್ಯರ್ಥಿಗಳನ್ನು ಹುಡುಕಬೇಕಾಗಿದೆ. ಮಾಜಿ ಸಚಿವ ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಸೇರಿದಂತೆ ಹಲವು ಹೆಸರುಗಳು ಕೇಳಿಬಂದಿವೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟರೂ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದಲೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ತುಮಕೂರಿನಲ್ಲಿ ಹಾಲಿ ಸಂಸದ ಬಸವರಾಜು ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಸಂಸದ ಮುದ್ದಹನುಮೇಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರದಿಂದಲೂ ಬಿಜೆಪಿ ಹೊಸಬರನ್ನೇ ಕಣಕ್ಕಿಳಿಸುವ ಅನಿವಾರ್ಯತೆಯಿದೆ. ಬಳ್ಳಾರಿಯಲ್ಲೂ ಹಾಲಿ ಸಂಸದ ದೇವೇಂದ್ರಪ್ಪ, ದಾವಣಗೆರೆಯ ಜಿ.ಎಂ.ಸಿದ್ದೇಶ್ವರ್, ಹಾವೇರಿಯ ಶಿವಕುಮಾರ್ ಉದಾಸಿ, ಬೆಳಗಾವಿಯ ಮಂಗಳ ಅಂಗಡಿ, ಚಾಮರಾಜನಗರದಿಂದ ವಿ.ಶ್ರೀನಿವಾಸ ಪ್ರಸಾದ್ ಸ್ರ್ಪಧಿಸುವುದಿಲ್ಲ ಎಂದು ಹೇಳಿರುವುದರಿಂದ ಸುಮಾರು 8 ರಿಂದ 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ.

ಉತ್ತರಾಖಂಡ್‍ನಲ್ಲಿ ಕ್ಲೋರಿನ್ ಸೋರಿಕೆ, ಸ್ಥಳಕ್ಕೆ ದೌಡಾಯಿಸಿದ ಎನ್‌ಡಿಆರ್‌ಎಫ್

ಬೆಂಗಳೂರು ಉತ್ತರದಿಂದ ಡಿ.ವಿ.ಸದಾನಂದಗೌಡ ಈ ಮೊದಲು ಸ್ರ್ಪಸುವುದಿಲ್ಲ ಎಂದು ಹೇಳಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೊನೆ ಕ್ಷಣದವರೆಗೂ ಇಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರು ಸೆಂಟ್ರಲ್‍ನಿಂದ ಹಾಲಿ ಸಂಸದ ಪಿ.ಸಿ.ಮೋಹನ್‍ಗೆ ಟಿಕೆಟ್ ಕೊಡುವ ಬಗ್ಗೆ ಪಕ್ಷದಲ್ಲೇ ವಿರೋಧವಿದೆ. ಆದರೆ ಈಗ ಬಿಜೆಪಿ ಸಂಪೂರ್ಣವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಯಂತ್ರಣಕ್ಕೆ ಬಂದಿರುವುದರಿಂದ ಮತ್ತೊಮ್ಮೆ ಅವರಿಗೆ ಟಿಕೆಟ್ ಸಿಕ್ಕರೂ ಅಚ್ಚರಿಯಿಲ್ಲ.

ಮಂಗಳೂರು ಕ್ಷೇತ್ರದಿಂದ ನಳಿನ್‍ಕುಮಾರ್ ಕಟೀಲ್‍ಗೂ ಟಿಕೆಟ್ ಕೈತಪ್ಪುವ ಸಾಧ್ಯತೆಗಳೇ ಹೆಚ್ಚಾಗಿವೆ. ಮಾಜಿ ಸಚಿವ ನಾಗರಾಜ್ ಶೆಟ್ಟಿ ಹಾಗೂ ಸಂಘ ಪರಿವಾರದ ಅರುಣ್ ಕುಮಾರ್ ಪುತ್ತಿಲ ಹೆಸರುಗಳು ಚಾಲ್ತಿಯಲ್ಲಿವೆ. ಹಾಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ, ಚಿಕ್ಕಮಗಳೂರು ಕ್ಷೇತ್ರವನ್ನು ಬದಲಾಯಿಸಲಿದ್ದಾರೆ ಎಂಬ ವದಂತಿ ಹಬ್ಬಿದೆ.

ಉತ್ತರ ಕನ್ನಡದಿಂದ ಅನಂತಕುಮಾರ್ ಹೆಗ್ಡೆಗೆ ಟಿಕೆಟ್ ಕೊಡುವ ಬಗ್ಗೆಯೂ ಭಾರೀ ವಿರೋಧವಿದೆ. ಹಿಂದೂ ಫೈಯರ್ ಬ್ರಾಂಡ್ ಎಂದೇ ಗುರುತಿಸಿಕೊಂಡಿರುವ ಅವರಿಗೆ ಟಿಕೆಟ್ ನಿರಾಕರಿಸಿದರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕವೂ ಇದೆ. ಬಾಗಲಕೋಟೆಯಿಂದ ಗದ್ದಿಗೌಡರ್, ನನಗೆ ಟಿಕೆಟ್ ಬೇಡ ಎಂದು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಹೀಗೆ ಹಲವು ಕ್ಷೇತ್ರಗಳಲ್ಲಿ ಒಂದಿಲ್ಲೊಂದು ಕಾರಣಗಳಿಂದ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಹೀಗಾಗಿ ಹೊಸ ಮುಖಗಳನ್ನು ಕಣಕ್ಕಿಳಿಸುವ ಅನಿವಾರ್ಯತೆ ಬಿಜೆಪಿಗಿದೆ.

ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಎದುರಿಸುತ್ತಿರುವ ಮೊದಲ ಮಹಾ ಚುನಾವಣೆ ಇದಾಗಿರುವುದರಿಂದ 18 ರಿಂದ 20 ಕ್ಷೇತ್ರಗಳನ್ನು ಗೆದ್ದು ಅದರ ಶ್ರೇಯಸ್ಸನ್ನು ಬಿ.ವೈ.ವಿ ತಲೆಗೆ ಕಟ್ಟಲು ಪಕ್ಷದೊಳಗಿನ ಒಂದು ಬಣ ಸಜ್ಜಾಗಿದೆ.

RELATED ARTICLES

Latest News