ಬೆಂಗಳೂರು,ಡಿ.21- ಪ್ರಧಾನಿ ಹುದ್ದೆಯ ಅಭ್ಯರ್ಥಿ ಸ್ಥಾನಕ್ಕೆ ಪ್ರಸ್ತಾಪಿಸಲಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರಾಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಕಳೆದ 6 ತಿಂಗಳಿನಿಂದಲೂ ಈ ನಿಟ್ಟಿನಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.
ಮಲ್ಲಿಕಾರ್ಜುನ ಖರ್ಗೆಯವರು ಕಳೆದ ಲೋಕಸಭೆ ಚುನಾವಣೆಯ ಹಿನ್ನಡೆಯಿಂದ ತೀರಾ ಅಸಮಾಧಾನಗೊಂಡಿದ್ದು, ಈ ಬಾರಿ ವಯೋಸಹಜತೆ ಹಾಗೂ ಅಖಿಲ ಭಾರತ ಮಟ್ಟದಲ್ಲಿ ಪ್ರಚಾರ ನಡೆಸಿ ಚುನಾವಣೆ ನಡೆಸಬೇಕಾದ ಕಾರ್ಯದೊತ್ತಡದ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ರ್ಪಸುವುದಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಆದರೆ ಅವರ ಮನವೊಲಿಕೆಗೆ ರಾಜ್ಯ ಕಾಂಗ್ರೆಸಿಗರು ಸಾಕಷ್ಟು ಸರ್ಕಸ್ ನಡೆಸುತ್ತಿದ್ದಾರೆ.
ಕಲ್ಬುರ್ಗಿ ಕಾಂಗ್ರೆಸ್‍ನ ಭದ್ರ ಕೋಟೆ. ಹಲವಾರು ವರ್ಷಗಳಿಂದಲೂ ಕಾಂಗ್ರೆಸ್ ತಮ್ಮ ಹಿಡಿತ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಹಿನ್ನಡೆಯಾಗಿದೆಯೇ ಹೊರತು ಅದು ಆತಂಕ ಪಡುವಂತಹ ಸೋಲಲ್ಲ. ಈ ಬಾರಿ ಕಾಂಗ್ರೆಸ್ ಖಂಡಿತಾ ಗೆಲ್ಲುತ್ತದೆ. ಇಡೀ ಸರ್ಕಾರವೇ ನಿಮ್ಮ ಬೆನ್ನಿಗೆ ನಿಂತು ಗೆಲ್ಲಿಸುವ ಹೊಣೆ ಹೊರಲಿದೆ ಎಂದು ರಾಜ್ಯ ನಾಯಕರು ಮಲ್ಲಿಕಾರ್ಜುನ ಖರ್ಗೆಯವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷರೇ ಚುನಾವಣೆಯಿಂದ ಹಿಂದೆ ಸರಿದಿದ್ದರೆ, ಅದು ನಕಾರಾತ್ಮಕ ಸಂದೇಶ ರವಾನೆಗೆ ಕಾರಣವಾಗುತ್ತದೆ. ಕಾಂಗ್ರೆಸ್ ಶಸ್ತ್ರ ತ್ಯಾಗ ಮಾಡಿದೆ ಎಂಬ ಅರ್ಥದಲ್ಲಿ ವಿಪಕ್ಷಗಳು ವ್ಯಾಖ್ಯಾನ ಮಾಡುತ್ತವೆ. ಹೀಗಾಗಿ ನಿಮ್ಮ ಸ್ಪರ್ಧೆ ಪಕ್ಷದ ಆತ್ಮವಿಶ್ವಾಸ ಹೆಚ್ಚಿಸಲು ಅನಿವಾರ್ಯ ಎಂದು ರಾಜ್ಯ ನಾಯಕರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಗೃಹಸಚಿವ ಪರಮೇಶ್ವರ್ ಅವರನ್ನು ಭೇಟಿಯಾದ ಕಿಚ್ಚ ಸುದೀಪ್
ಒಂದು ವೇಳೆ ಖರ್ಗೆಯವರು ಸ್ರ್ಪಧಿಸುವುದೇ ಇಲ್ಲ ಎಂದಾದರೆ ಪರ್ಯಾಯ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಖರ್ಗೆಯವರ ಕುಟುಂಬದಲ್ಲಿನ ಸದಸ್ಯರಿಗೂ ಟಿಕೆಟ್ ಕೊಟ್ಟು ಗೆಲ್ಲಿಸಿಕೊಡಬೇಕು ಎಂಬ ಒತ್ತಾಸೆಗಳಿವೆ. ಆದರೆ ಪ್ರಿಯಾಂಕ್ ಖರ್ಗೆ ಹೊರತುಪಡಿಸಿದರೆ ಕಲ್ಬುರ್ಗಿ ಜಿಲ್ಲಾ ರಾಜಕಾರಣದಲ್ಲಿ ಜನಜನಿತವಾದ ನಾಯಕರು ಖರ್ಗೆ ಕುಟುಂಬದಿಂದ ಹೊರಬಂದಿಲ್ಲ. ಹೀಗಾಗಿ ಯಾರನ್ನು ಕಣಕ್ಕಿಳಿಸಬೇಕೆಂಬ ಪ್ರಶ್ನೆ ಗಂಭೀರವಾಗಿ ಚರ್ಚೆಯಾಗುತ್ತಿದೆ. ಖರ್ಗೆಯವರ ಪುತ್ರರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರನ್ನೇ ಕಣಕ್ಕಿಳಿಸುವ ಬಗ್ಗೆ ಚರ್ಚೆಗಳಾಗುತ್ತಿವೆ.