Friday, November 22, 2024
Homeರಾಜ್ಯಮತದಾನದಲ್ಲೂ ಮಹಿಳೆಯರೇ ಮುಂದು

ಮತದಾನದಲ್ಲೂ ಮಹಿಳೆಯರೇ ಮುಂದು

ಬೆಂಗಳೂರು, ಮೇ2- ಕಾಂಗ್ರೆಸ್ ಹಾಗೂ ಎನ್‍ಡಿಎ ಮೈತ್ರಿಕೂಟವಾದ ಬಿಜೆಪಿ-ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ಲೋಕಸಭಾ ಚುನಾವಣಾ ಮೊದಲ ಹಂತದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿ ಭೇಷ್ ಎನಿಸಿಕೊಂಡಿದ್ದಾರೆ. ಶಿಕ್ಷಣ, ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕøತಿ, ವಿಜ್ಞಾನ, ಬಾಹ್ಯಾಕಾಶ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮನಾಗಿ ಸ್ಪರ್ಧೆವೊಡ್ಡುತ್ತಿರುವ ಮಹಿಳೆಯರು ಮತದಾನದಲ್ಲೂ ತಮ್ಮ ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ.

ಕಳೆದ ಏಪ್ರಿಲ್ 26ರಂದು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು ತಿಳಿದುಬಂದಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಪುರುಷರ ಮತದಾನ ಪ್ರಮಾಣ ಶೇಕಡಾ 69.48 ಆಗಿದ್ದರೆ, ಮಹಿಳೆಯರ ಮತದಾನ ಪ್ರಮಾಣ 69.65 ಆಗಿದೆ. ಒಟ್ಟು 1,00,16,921 ಪುರುಷರು ಮತ ಚಲಾಯಿಸಿದ್ದರೆ 1,00,20,796 ಮಹಿಳೆಯರು ಮತ ಚಲಾಯಿಸಿದ್ದಾರೆ. ಅಂದರೆ, ಪುರುಷ ಮತದಾರರಿಗಿಂತ ಮಹಿಳಾ ಮತದಾರರು 3,875 ಹೆಚ್ಚಿರುವುದನ್ನು ಇದು ತೋರಿಸಿದೆ.

ಬೆಂಗಳೂರು ಉತ್ತರ, ಸೆಂಟ್ರಲ್, ದಕ್ಷಿಣ, ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ ಚಲಾಯಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗಿಂತ ಪುರುಷ ಮತದಾರರ ಸಂಖ್ಯೆ ಹೆಚ್ಚಿತ್ತು. ಆಗ ಪುರುಷರ ಮತದಾನ ಪ್ರಮಾಣ ಶೇ 69.55 ಆಗಿದ್ದರೆ, ಮಹಿಳೆಯರದ್ದು ಶೇ 67.65 ಆಗಿತ್ತು. 2014 ರಲ್ಲಿ ಪುರುಷ ಮತದಾರರು ಶೇ 68.59 ಆಗಿದ್ದರೆ ಮಹಿಳಾ ಮತದಾರರ ಪ್ರಮಾಣ ಶೇ 65.79 ಆಗಿತ್ತು.

ಮಹಿಳಾ ಸಬಲೀಕರಣ, ಸುಧಾರಿತ ಶಿಕ್ಷಣ ಮತ್ತು ಹೆಚ್ಚಿದ ಜಾಗೃತಿಯು ಮಹಿಳಾ ಮತದಾರರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಏಳು ರಾಜ್ಯಗಳಲ್ಲಿ ಮಹಿಳಾ ಮತದಾನದ ಪ್ರಮಾಣ ಹೆಚ್ಚಾಗಿತ್ತು.

ಮಹಿಳಾ ಮತದಾನ ಹೆಚ್ಚಳ:
ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ಪುದುಚೇರಿ, ನಾಗಾಲ್ಯಾಂಡ್, ತಮಿಳುನಾಡು, ಉತ್ತರಾಖಂಡ, ಪಶ್ಚಿಮ ಬಂಗಾಳ, ಬಿಹಾರ, ಕೇರಳ ಮತ್ತು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಹಂತ-1 ಮತ್ತು ಹಂತ-2ರಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ ಚಲಾಯಿಸಿದ್ದಾರೆ. ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಆಯೋಜಿಸಿದ್ದ ಸಂವಾದ ಕಾರ್ಯಕ್ರಮಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ವಿವರಗಳನ್ನು ತಿಳಿದುಕೊಳ್ಳಲು ಮತ್ತು ಮತ ಚಲಾಯಿಸಲು ಹೆಚ್ಚು ಉತ್ಸುಕರಾಗಿದ್ದು ಕಂಡುಬಂದಿತ್ತು.

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುವ ಪ್ರದೇಶಗಳಲ್ಲಿಯೂ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು. ಇಲ್ಲಿಯೂ ಪುರುಷರಿಗಿಂತ ಮಹಿಳೆಯರ ಮತದಾನ ಹೆಚ್ಚುತ್ತದೆಯೇ ಎಂದು ಕಾದು ನೋಡಬೇಕಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News