ನವದೆಹಲಿ,ಡಿ.26- ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಈ ಬಾರಿಯು ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮೂರನೇ ಬಾರಿಗೆ ಜನಾದೇಶ ಪಡೆದು ಅಧಿಕಾರದ ಗದ್ದುಗೆ ಹಿಡಿಯಲಿದೆ. ಸಿವೋಟರ್ ಮತ್ತು ಎಬಿಪಿ ನ್ಯೂಸ್ ದೇಶದ 543 ಲೋಕಸಭಾ ಕ್ಷೇತ್ರಗಳಲ್ಲಿ ಡಿ.15ರಿಂದ 21ರವರೆಗೆ 13,115 ಸ್ಯಾಂಪಲ್‍ಗಳ ಮೂಲಕ ಸಮೀಕ್ಷೆ ನಡೆಸಿದೆ.
ಈ ಸಮೀಕ್ಷೆಯ ಪ್ರಕಾರ 543 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 295ರಿಂದ 335 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯುವ ಸಂಭವವಿದೆ. ಬಿಜೆಪಿಗೆ ಪ್ರಬಲ ಪೈಪೆಪೋಟಿ ನೀಡುತ್ತಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 165ರಿಂದ 205 ಕ್ಷೇತ್ರಗಳನ್ನು ಗೆದ್ದರೆ 35ರಿಂದ 60 ಕ್ಷೇತ್ರಗಳಲ್ಲಿ ಇತರರು ಗೆಲ್ಲಬಹುದಾಗಿದೆ.
ಈ ಸಮೀಕ್ಷೆಯಲ್ಲಿ ಮತ್ತೊಂದು ಗೋಚರವಾಗಿರುವ ಅಂಶವೆಂದರೆ ವಲಯವಾರುಗಳಲ್ಲಿ ಉತ್ತರಭಾರತ, ಪಶ್ಚಿಮ ಭಾರತ, ಮಧ್ಯಭಾರತಗಳಲ್ಲಿ ಬಿಜೆಪಿಗೆ ಭಾರೀ ಗೆಲುವು ಸಿಕ್ಕರೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಗೆಲ್ಲುವ ಸಂಭವವಿದೆ. ಈಶಾನ್ಯ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸಲಿವೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಉತ್ತರವಲಯದ 180 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 150ರಿಂದ 160 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ. ಪಶ್ಚಿಮ ವಲಯದ 78 ಲೋಕಸಭಾ ಕ್ಷೇತ್ರಗಳ ಪೈಕಿಗೆ ಬಿಜೆಪಿಗೆ 45ರಿಂದ 50 ಕ್ಷೇತ್ರಗಳು ಧಕ್ಕಲಿವೆ. ದಕ್ಷಿಣ ಭಾರತದ 132 ಕ್ಷೇತ್ರಗಳ ಪೈಕಿ ಬಿಜೆಪಿ 20ರಿಂದ 30 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 70ರಿಂದ 80 ಸ್ಥಾನಗಳನ್ನು ಗೆಲ್ಲಬಹುದಾಗಿದೆ.
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸುಧಾರಣೆಯಾಗಲಿದೆ : ಸಿದ್ದರಾಮಯ್ಯ
ಇದೇ ರೀತಿ ಪೂರ್ವ ವಲಯದಲ್ಲಿ 50ರಿಂದ 60, ಉತ್ತರ ವಲಯದಲ್ಲಿ 20ರಿಂದ 30 ಹಾಗೂ ಪಶ್ಚಿಮ ವಲಯದಲ್ಲಿ 25ರಿಂದ 30 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ಹೇಳಿದೆ. ಇತ್ತೀಚೆಗೆ ನಡೆದ ಪಂಚರಾಜ್ಯಗಳ ಪೈಕಿ ಮೂರು ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟ ಮೇಲುಗೈ ಸಾಧಿಸುವ ಸಾಧ್ಯತೆ ಇದೆ.
ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ ಬಿಜೆಪಿ 27ರಿಂದ 29, ಛತ್ತೀಸ್‍ಗಢದ 11 ಕ್ಷೇತ್ರಗಳ ಪೈಕಿ 9ರಿಂದ 11, ರಾಜಸ್ಥಾನದ 25 ಕ್ಷೇತ್ರಗಳ ಪೈಕಿ ಕಮಲ ಪಕ್ಷ 23ರಿಂದ 25 ಕ್ಷೇತ್ರಗಳನ್ನು ಗೆಲ್ಲಲಿದೆ. ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಬರೋಬ್ಬರಿ 73ರಿಂದ 75 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಶೇ.52ರಷ್ಟು ಮತ ಪಡೆದು 28 ಕ್ಷೇತ್ರಗಳ ಪೈಕಿ 22ರಿಂದ 24 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ 4ರಿಂದ 6 ಸ್ಥಾನಗಳನಷ್ಟೇ ಗೆಲ್ಲಬಹುದಾಗಿದೆ. ಉಳಿದಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ ಪಂಜಾಬ್‍ನಲ್ಲಿ ಆಪ್, ಬಿಹಾರದಲ್ಲಿ ಆರ್‍ಜೆಡಿ, ಜೆಡಿಯು, ಮಹಾರಾಷ್ಟ್ರದಲ್ಲಿ ಅಘಡಿ ಮೈತ್ರಿಕೂಟ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುನ್ನಡೆ ಸಾಧಿಸಲಿದೆ.
ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಮಸೂದೆಯಲ್ಲಿ ಏನೇನಿದೆ..?
ದೇಶದಲ್ಲಿ ಯಾರು ಪ್ರಧಾನಿಯಾಗಬೇಕು ಎಂಬುದಕ್ಕೆ ಶೇ.58.6ರಷ್ಟು ಜನ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿದ್ದರೆ, ಕಾಂಗ್ರೆಸ್ ನಾಯಕ ಶೆಜಕಜೀ.32ರಷ್ಟು ಜನ ಬೆಂಬಲ ಸೂಚಿಸಿದ್ದಾರೆ. ಶೇ.47.2ರಷ್ಟು ಜನ ಪ್ರಧಾನಿ ಕಾರ್ಯವೈಖರಿ ತೃಪ್ತಿಕರವಾಗಿದೆ ಎಂದರೆ, ಶೇ.30.2ರಷ್ಟು ಜನ ಆಡಳಿತ ಸಮಾಧಾನಕರವಾಗಿದೆ ಎಂದಿದ್ದಾರೆ, ಶೇ.21.3ರಷ್ಟು ಜನಎಲ್ಲವೂ ತೃಪ್ತಿಕರವಾಗಿಲ್ಲ ಎಂದು ಹೇಳಿದ್ದಾರೆ.