ಬೆಂಗಳೂರು, ಮೇ 3– ರಾಜ್ಯದ ಪ್ರಸಕ್ತ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ 448.98 ಕೋಟಿ ರೂ. ಮೊತ್ತದ ನಗದು, ಚಿನ್ನ, ಬೆಳ್ಳಿ, ಡ್ರಗ್ಸ್ , ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಲಾಗಿದ್ದು, ಈ ಸಂಬಂಧ 2262 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿ ಕಾರಿಗಳ ಕಚೇರಿ ಪ್ರಕಟಣೆ ಪ್ರಕಾರ, 2029 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಘೋರ ಅಪರಾಧದಡಿಯಲ್ಲಿ 3,298 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಪರವಾನಗಿ ಉಲ್ಲಂಘನೆಯಡಿ 5,392 ಪ್ರಕರಣಗಳನ್ನು ದಾಖಲಿಸಲಾಗಿದೆ. ಎನ್‌ಡಿಪಿಎಸ್ ಅಡಿಯಲ್ಲಿ 186 ಪ್ರಕರಣಗಳನ್ನು ಹಾಗೂ ಅಬಕಾರಿ ಕಾಯ್ದೆಯಡಿ 32,902 ಪ್ರಕರಣಗಳನ್ನು ದಾಖಲಿಸಲಾಗಿದೆ.
ಕಳೆದ ಮಾರ್ಚ್ 16 ರಿಂದ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅಂದಿನಿಂದ ನಿಯಮಬಾಹಿರವಾಗಿ ಸಾಗಾಟ ಮಾಡುವ ಹಣ, ಮದ್ಯ, ಡ್ರಗ್ಸ್ , ಚಿನ್ನ, ಬೆಳ್ಳಿ ಹಾಗೂ ಇತರ ವಸ್ತುಗಳನ್ನು ನಿರಂತರವಾಗಿ ಜಪ್ತಿ ಮಾಡಲಾಗುತ್ತಿದೆ. ನಿನ್ನೆಯವರೆಗೆ ಒಟ್ಟಾರೆ 448.98 ಕೋಟಿ ರೂ.ನಷ್ಟು ನಗದು, ಚಿನ್ನ, ಬೆಳ್ಳಿ ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆೆ.
ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಮತದಾನ ಮುಗಿದಿದ್ದು, 2ನೇ ಹಂತದ 14 ಕ್ಷೇತ್ರಗಳಿಗೆ ಮತದಾನ ನಡೆಯಲು ಇನ್ನೂ ನಾಲ್ಕು ದಿನ ಬಾಕಿ ಇದೆ. ರಾಜ್ಯದಲ್ಲಿ 141.10 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್ಸ್ , ಚಿನ್ನ, ಬೆಳ್ಳಿ, ಉಚಿತ ಉಡುಗೊರೆಗಳನ್ನು ಪೊಲೀಸರು, ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ವಶಪಡಿಸಿಕೊಂಡಿವೆ.
ಅಬಕಾರಿ ಇಲಾಖೆಯವರು 178.58 ಕೋಟಿ ರೂ. ವೌಲ್ಯದ ಮದ್ಯ, ಡ್ರಗ್ಸ್ ಅನ್ನು ಹಾಗೂ ಆದಾಯ ತೆರಿಗೆ ಇಲಾಖೆ ಅಧಿ ಕಾರಿಗಳು 49.19 ಕೋಟಿ ರೂ. ವೌಲ್ಯದ ನಗದು, ಚಿನ್ನ, ವಜ್ರದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಾಣಿಜ್ಯ ತೆರಿಗೆ ಅಧಿ ಕಾರಿಗಳು 80.11 ಕೋಟಿ ರೂ. ಮೊತ್ತದ ಚಿನ್ನ, ಬೆಳ್ಳಿ, ಉಚಿತ ಉಡುಗೊರೆ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ಸಿಸಿಬಿ ಪೊಲೀಸ್ ಠಾಣೆ ತಂಡದವರು, 20,35,000 ರೂ. ವೌಲ್ಯದ 407 ಗ್ರಾಂ ಎಂಡಿಎಂಎ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.