Tuesday, May 21, 2024
Homeರಾಜಕೀಯವೀರಶೈವ ಲಿಂಗಾಯತ ಮತಗಳನ್ನು ಕಬಳಿಸಲು ಎಲ್ಲಾ ಪಕ್ಷಗಳಿಂದ ಭಾರಿ ಕಸರತ್ತು

ವೀರಶೈವ ಲಿಂಗಾಯತ ಮತಗಳನ್ನು ಕಬಳಿಸಲು ಎಲ್ಲಾ ಪಕ್ಷಗಳಿಂದ ಭಾರಿ ಕಸರತ್ತು

ಬೆಂಗಳೂರು, ಮೇ.3- ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳ ಪೈಕಿ ಅಭ್ಯರ್ಥಿಗಳ ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ವೀರಶೈವ ಲಿಂಗಾಯತ ಮತಬುಟ್ಟಿಗೆ ಎಲ್ಲಾ ಪಕ್ಷಗಳೂ ಕೈ ಹಾಕಿವೆ.

ಇದೇ 7 ರಂದು ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ, ಚಿಕ್ಕೋಡಿ, ಬೆಳಗಾವಿ, ಧಾರವಾಡ, ಹಾವೇರಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಬೀದರ್‌, ವಿಜಾಪುರ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತರೇ ನಿರ್ಣಾಯಕರಾಗಿದ್ದು, ಈ ಸಮುದಾಯವನ್ನು ಸೆಳೆಯಲು ಅಭ್ಯರ್ಥಿಗಳ ಜೊತೆಗೆ ಕಾಂಗ್ರೆಸ್‌ ಮತ್ತು ಎನ್‌ಡಿಎ ಮೈತ್ರಿಕೂಟ ಇನ್ನಿಲ್ಲದ ಕಸರತ್ತು ನಡೆಸಿದೆ.

ವೀರಶೈವ ಸಮುದಾಯದ ಒಳಪಂಗಡಗಳಿಗೆ ಅನುಗುಣವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹೀಗಾಗಿ ಈ ಸಮುದಾಯವನ್ನು ಸೆಳೆಯಲು ಇನ್ನಿಲ್ಲದ ತಂತ್ರಗಾರಿಕೆಯನ್ನು ರೂಪಿಸಲಾಗುತ್ತದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಭರ್ಜರಿ ಫಸಲು ತೆಗೆದಿದ್ದ ಕಾಂಗ್ರೆಸ್‌ ಈಗಲೂ ಈ ಚುನಾವಣೆಯಲ್ಲೂ ಅದೇ ಫಲಿತಾಂಶ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದೆ. ಹೀಗಾಗಿಯೇ ವೀರಶೈವ ಸಮುದಾಯದ ಒಳಪಂಗಡಗಳಾದ ಪಂಚಮಶಾಲಿ, ಗಾಣಿಗ ಮತ್ತು ಸಾಧು ಲಿಂಗಾಯತರಿಗೆ ಜನಸಂಖ್ಯೆಗನುಗುಣವಾಗಿ ಟಿಕೆಟ್‌ ಹಂಚಿಕೆ ಮಾಡಿದೆ.

ಈವರೆಗೂ ವೀರಶೈವ ಲಿಂಗಾಯತ ಮತಗಳು ತನಗೆ ಯಾವಾಗಲೂ ಕಟ್ಟಿಟ್ಟ ಬುತ್ತಿ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಮರ್ಮಾಘಾತ ನೀಡಿತ್ತು.

ಸಮುದಾಯದ ಪ್ರಭಾವಿ ನಾಯಕ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ಹಾಗೂ ಆ ಸಮುದಾಯವನ್ನು ಕಡೆಗಣಿಸಿದ್ದರ ಪರಿಣಾಮ ಬಿಜೆಪಿ ಚುನಾವಣೆಯಲ್ಲಿ ಭಾರೀ ಬೆಲೆ ತೆತ್ತಿತ್ತು. ಯಾವಾಗ ತನ್ನ ಸಾಂಪ್ರದಾಯಿಕ ಮತ ಬ್ಯಾಂಕ್‌ ಕೈಬಿಟ್ಟು ಹೋಗಲಿದೆ ಎಂಬುದು ಅರಿವಾಗುತ್ತಿದ್ದಂತೆ ಬಿಜೆಪಿ ತನ್ನ ರಣತಂತ್ರವನ್ನು ಬದಲಾಯಿಸಿದೆ.

ರಾಜ್ಯದಲ್ಲಿ ಶೇಕಡಾ 17 ರಷ್ಟು ಇದೇ ಸಮುದಾಯ ಜನರಿದ್ದಾರೆ. ಇವರನ್ನು ಬಿಟ್ಟರೆ ಒಕ್ಕಲಿಗರು ಹೆಚ್ಚಾಗಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಈ ಸಮುದಾಯದ ಪಾತ್ರ ಶೇಕಡಾ 12 ರಷ್ಟಿದೆ.

ಲಿಂಗಾಯತರು ಇತ್ತೀಚಿನ ಕೆಲವು ದಶಕಗಳಿಗೆ ಬಿಜೆಪಿ ಪಕ್ಷದತ್ತ ಮುಖ ಮಾಡಿದ್ದಾರೆ. ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರಿಂದ, ಉತ್ತರ ಕರ್ನಾಟಕದಲ್ಲಿ ಮೈತ್ರಿ ಎಷ್ಟರ ಮಟ್ಟಿಗೆ ಕೈ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ 2019ರ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿತ್ತು.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ 37 ಲಿಂಗಾಯತ ಶಾಸಕರು ಗೆದ್ದು ಬೀಗಿದ್ದಾರೆ. 2018ಕ್ಕೆ ಹೋಲಿಸಿದರೆ ಈ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿ ಕಳೆದ ಚುನಾವಣೆಯಲ್ಲಿ ಕೇವಲ 15 ಲಿಂಗಾಯತ ಅಭ್ಯರ್ಥಿಗಳು ಗೆದ್ದಿದ್ದರು. ಇನ್ನು ಒಟ್ಟಾರೆ ಲಿಂಗಾಯತ ಶಾಸಕರ ಸಂಖ್ಯೆಯು ಹೆಚ್ಚಾಗಿದ್ದು, ಇದರ ಲಾಭವನ್ನು ಪಕ್ಷಗಳು ಹೇಗೆ ಪಡೆಯಲಿವೆ ಎಂಬುದು ದೊಡ್ಡ ಪ್ರಶ್ನೆ ಆಗಿದೆ.

ಕರ್ನಾಟಕದ 224 ಕ್ಷೇತ್ರಗಳಲ್ಲಿ 90 ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯವೇ ಡಾಮಿನೆಟೆಡ್‌ ಇದೆ. ಇನ್ನು ಈ ಸಮುದಾಯ ಬಿಜೆಪಿಯಿಂದ ಕಾಂಗ್ರೆಸ್‌ ಕಡೆ ಮುಖ ಮಾಡಿರಲು ಹಲವು ಕಾರಣಗಳಿವೆ. ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಬಿಎಸ್‌ ಯಡಿಯೂರಪ್ಪ ಅವರನ್ನು ಸೈಡಲೈನ್‌ ಮಾಡಿದ್ದು, ಪಕ್ಷಕ್ಕೆ ಪೆಟ್ಟು ನೀಡಿದೆ.

ಈಗ ಮತ್ತೆ ಬಿಜೆಪಿಯತ್ತ ಲಿಂಗಾಯತ ಸಮುದಾಯ ಮುಖ ಮಾಡಿದೆ. ದೇಶದ ವಿಚಾರಕ್ಕೆ ಬಂದಾಗ ಈ ಸಮುದಾಯ ಒಟ್ಟಾಗಿ ನಿಲ್ಲುವುದು ಕಳೆದ ಹಲವು ಚುನಾವಣೆಗಳಲ್ಲಿ ಎದ್ದು ಕಾಣುತ್ತದೆ. ಈಗ ರಣ ರಂಗದಲ್ಲಿ ಮತ್ತೆ ಬಿಎಸ್‌ವೈ ಕಾಣಿಸಿಕೊಂಡಿದ್ದು, ಇವರ ಮಗನಿಗೂ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್‌ ನೀಡದೇ ಇರುವ ಕಾರಣಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದ ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್‌ ಪಕ್ಷಕ್ಕೆ ಕೊಂಚ ಪೆಟ್ಟು ಬಿದ್ದಿತ್ತು. ಆದರೆ ಈಗ ರಾಜಕೀಯ ಸಮೀಕರಣ ಬದಲಾಗಿದೆ. ಕಾಂಗ್ರೆಸ್‌ಗೆ ಕೈ ನೀಡಿರುವ ಜಗದೀಶ್‌ ಶೆಟ್ಟರ್‌ ಮತ್ತೆ ಬಿಜೆಪಿ ಬಾವುಟ ಹಿಡಿದಿದ್ದಾರೆ. ಅಲ್ಲದೆ ಬೆಳಗಾವಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಜಗದೀಶ್‌ ಶೆಟ್ಟರ್‌ ಘರ್‌ ವಾಪಸಿಯಿಂದ ಪಕ್ಷದಲ್ಲಿ ಕಾಣಿಸಿಕೊಂಡಿದ್ದ ಸಣ್ಣ ಬಿರುಕು ಸಹ ಮುಚ್ಚಿದಂತೆ ಕಾಣುತ್ತದೆ. ಈ ಬಾರಿ ಬಿಜೆಪಿ ಕಳೆದ ಬಾರಿಯಂತೆ ಈ ಬಾಗದಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆಯನ್ನು ಮಾಡಲು ಎದುರು ನೋಡುತ್ತಿದೆ. ಈ ಬಾರಿ ಬೆಳಗಾವಿ ಕ್ಷೇತ್ರದ ಮೂಲಕ ಮೊದಲ ಬಾರಿಗೆ ಲೋಕಸಭಾ ಪ್ರವೇಶಿಸಲು ಜಗದೀಶ್‌ ಶೆಟ್ಟರ ಎದುರು ನೋಡುತ್ತಿದ್ದಾರೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 9 ಲಿಂಗಾಯತ ಅಭ್ಯರ್ಥಿಗಳಿಗೆ ಅವಕಾಶ ನೀಡಿದರೆ, ಮೂವರು ಒಕ್ಕಲಿಗರಿಗೆ ಚುನಾವಣೆ ಸ್ಪರ್ಧಿಸುವ ಅವಕಾಶ ನೀಡಿದೆ. ಈ ಅಂಕಿ ಅಂಶದಲ್ಲಿ ಕಾಂಗ್ರೆಸ್‌ ಕೊಂಚ ಹಿಂದೆ ಬಿದ್ದಿದೆ. ಕಾಂಗ್ರೆಸ್‌ 5 ಲಿಂಗಾಯತ, 6 ಒಕ್ಕಲಿಗರಿಗೆ ಅವಕಾಶ ನೀಡಿದೆ. ಇನ್ನು ಜೆಡಿಎಸ್‌ ಇಬ್ಬರು ಒಕ್ಕಲಿಗ ಅಭ್ಯರ್ಥಿಗಳಿಗೆ ಮಣೆ ಹಾಕಿದೆ.

ಕಾಂಗ್ರೆಸ್‌ ಸಹ ಈ ಹಿಂದೆ ಅಹಿಂದ ಮತಗಳನ್ನು ತನ್ನತ್ತ ಸೆಳೆಯಲು ಬೇಕಾದ ಪ್ರಯತ್ನಗಳು ಮಾಡಿಕೊಂಡಿದೆ. ಅಂದಹಾಗೆ ಕಾಂಗ್ರೆಸ್‌ ಲಿಂಗಾಯತ, ಒಕ್ಕಲಿಗರು ಈ ಎರಡು ಸಮುದಾಯಕ್ಕಿಂತಲೂ ಹೆಚ್ಚಿನ ಒತ್ತನ್ನು ಬೇರೆ ಸಮುದಾಯಕ್ಕೆ ನೀಡಿ ಮತದಾರರ ಮನವೊಲಿಸುವಲ್ಲಿ ಸಫಲವಾಗಿದೆ. ಕಾಂಗ್ರೆಸ್‌ ಕುರುಬ ಸಮುದಾಯದ ಸಿದ್ಧರಾಮಯ್ಯ ಅವರನ್ನು ಸಿಎಂ ಮಾಡಿದ್ದು, ರಾಷ್ಟ್ರೀಯ ಅಧ್ಯಕ್ಷರನ್ನಾಗಿ ದಲಿತ ಮುಖಂಡ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ನೇಮಕ ಮಾಡಿದ್ದು, ಮಾಸ್ಟರ್‌ ಸ್ಟ್ರೋಕ್‌ ನೀಡಲು ಪ್ಲ್ಯಾನ್‌ ಮಾಡಿದೆ.

RELATED ARTICLES

Latest News