ಬೆಂಗಳೂರು, ಮೇ 23- ಪ್ರಸಕ್ತ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಸಂಬಂಧಿಸಿದಂತೆ ಆಯಾ ಕ್ಷೇತ್ರದಲ್ಲಿ ಪೂರ್ವ ಸಿದ್ಧತೆ ಆರಂಭಗೊಂಡಿದೆ. ಅಪರ ಚುನಾವಣಾಧಿಕಾರಿಗಳು, ಚುನಾವಣೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಮತ ಎಣಿಕೆ ಕಾರ್ಯಕ್ಕೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕೆಂಬ ಬಗ್ಗೆ ಸಭೆ ನಡೆಸಿ ಮಾರ್ಗದರ್ಶನಗಳನ್ನು ನೀಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 2 ಹಂತದಲ್ಲಿ ಮತದಾನ ಮುಗಿದಿದ್ದು, ಮತಯಂತ್ರಗಳು ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ. ಜೂನ್ 4 ರಂದು ಬೆಳಿಗ್ಗೆ ಮತ ಎಣಿಕೆ ಆರಂಭಗೊಂಡು ಸಂಜೆ ವೇಳೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ. ಮತ ಎಣಿಕೆಯ ದಿನದಂದು ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು. ಮತ ಎಣಿಕೆ ಕಾರ್ಯದಲ್ಲಿ ನಿರತರಾಗುವ ಸಿಬ್ಬಂದಿ ಹಾಗೂ ರಾಜಕೀಯ ಪ್ರತಿನಿಧಿಗಳು ಚುನಾವಣಾ ಏಜೆಂಟರುಗಳಿಗೆ ಮತ ಎಣಿಕೆ ಕೇಂದ್ರದ ಮುಖ್ಯದ್ವಾರದಿಂದ ಮೊಬೈಲ್ ತರುವುದಾಗಲೀ, ಬಳಸುವುದಾಗಲೀ ನಿಷೇಧಿಸುವಂತೆ ಸೂಚಿಸಲಾಗಿದೆ.
ಮತ ಎಣಿಕೆ ದಿನದಂದು ವಿದ್ಯುತ್ ವ್ಯತ್ಯಯವಾಗುವಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು, ಏಜೆಂಟರಿಗೆ ಹಾಗೂ ಮತ ಎಣಿಕೆ ಸಿಬ್ಬಂದಿಗೆ ಗುರುತಿನ ಚೀಟಿ ನೀಡುವುದು, ಮತ ಎಣಿಕೆಗೆ ಅಗತ್ಯವಿರುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡುವುದು… ಮೊದಲಾದ ವಿಚಾರಗಳ ಬಗ್ಗೆ ಸಭೆ ನಡೆಸಿ ಮಾಹಿತಿ ನೀಡಲಾಗಿದೆ.
ಮತ ಎಣಿಕೆ ಸಿಬ್ಬಂದಿಗೆ ಅಗತ್ಯವಿರುವ ಊಟೋಪಚಾರ, ನೀರಿನ ವ್ಯವಸ್ಥೆ, ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ನಿರ್ದೇಶನಗಳನ್ನು ಈಗಾಗಲೇ ನೀಡಿದ್ದಾರೆ.ಯಾವುದೇ ರೀತಿಯ ಲೋಪ ಮತ ಎಣಿಕೆ ದಿನದಂದು ಉಂಟಾಗದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಮತ ಎಣಿಕೆಗೆ ಇನ್ನು ಕೇವಲ 12 ದಿನಗಳು ಬಾಕಿ ಉಳಿದಿದ್ದು, ಅದಕ್ಕೆ ಪೂರಕವಾದ ಸಿದ್ಧತೆಯನ್ನು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಮಾಡಿಕೊಳ್ಳುತ್ತಿವೆ.