ಬೆಂಗಳೂರು,ಮೇ 6- ಲೋಕಸಭೆಯ 18ನೇ ಅವಧಿಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ 3ನೇ ಹಂತದಲ್ಲಿ ನಾಳೆ 12 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮಾರ್ಚ್ 16 ರಂದು ಘೋಷಣೆಯಾಗಿದ್ದ ವೇಳಾಪಟ್ಟಿಯ ಪ್ರಕಾರ, 94 ಕ್ಷೇತ್ರಗಳಿಗೆ ಮೇ 7 ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಈಗಾಗಲೇ ಗುಜರಾತಿನ ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಬಾಕಿ ಉಳಿದ 93 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಇವುಗಳ ಪೈಕಿ ಜಮ್ಮು ಮತ್ತು ಕಾಶ್ಮೀರ ಭಾಗದ ಅನಂತನಾಗ್ ರಚೋರಿ ಕ್ಷೇತ್ರದ ಚುನಾವಣೆ ಮೇ 25ಕ್ಕೆ ಮುಂದೂಡಿಕೆಯಾಗಿದೆ. ಈ ನಡುವೆ ಮಧ್ಯಪ್ರದೇಶದ ಬೇತಲ್ ಕ್ಷೇತ್ರಕ್ಕೆ 2ನೇ ಹಂತದಲ್ಲಿ ಏ.26 ರಂದು ಮತದಾನವೇಗಬೇಕಿತ್ತು. ಅದನ್ನು ಮೇ 7 ಕ್ಕೆ ಮುಂದೂಡಲಾಗಿದೆ. ಈ ಹೊಂದಾಣಿಕೆಯ ಭಾಗವಾಗಿ ಒಟ್ಟು 93 ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದೆ.
ಗುಜರಾತಿಯನಲ್ಲಿರುವ 25 ಕ್ಷೇತ್ರಗಳಿಗೆ, ದಾದರ್ ಮತ್ತು ನಾಗರಬೇಲಿ ಹಾಗೂ ದಾಮನ್-ದಯುನ 2 ಕ್ಷೇತ್ರಗಳಿಗೆ, ಗೋವಾದ ಉತ್ತರ ಗೋವಾ ಮತ್ತು ದಕ್ಷಿಣ ಗೋವಾದ 2 ಕ್ಷೇತ್ರಗಳಿಗೆ ಒಂದೇ ಬಾರಿ ಚುನಾವಣೆ ಪೂರ್ಣಗೊಳ್ಳಲಿದೆ.
ಅಸ್ಸಾಂನ 14 ಕ್ಷೇತ್ರಗಳ ಪೈಕಿ ಕೋಕ್ರಾಜಾರ್, ಧುಬ್ರಿ, ಬರ್ಬೇಟ್, ಗೌಹಾತಿ ಸೇರಿ 4 ಕ್ಷೇತ್ರಗಳಿಗೆ ಬಿಹಾರದ 40 ಕ್ಷೇತ್ರಗಳ ಪೈಕಿ ಜಹಂಜರ್‌ಪುರ್, ಸುಪೌಲ್, ಅರೈರಿಯಾ, ಮಾದೇಪುರ, ಕಗ್ರಾರಿಯಾ, ಛತ್ತೀಸ್‌ಗಡದ 11 ಕ್ಷೇತ್ರಗಳ ಪೈಕಿ ಸುರ್ಗುಜ, ಜಾಂಗೀರ್-ಚಂಪಾ, ಕೋರ್ಬಾ, ಬಿಸ್ಲಾಪುರ್, ದುರ್ಗ್, ರಾಯ್ಪುರ್, ರಾಯ್ಘರ್ ಸೇರಿ 7 ಕ್ಷೇತ್ರಗಳಿಗೆ ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ ಮೊರೇನಾ, ಗ್ವಾಲಿಯರ್, ಗುನ, ಸಾಗರ್, ವಿದಿಷ, ಭೂಪಾಲ್, ರಾಜ್ಘರ್, ಬಿಂದ್, ಬೇತಲ್, ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ ರಾಯ್ಘಡ, ಬಾರಾಮತಿ, ಓಸ್ಮಾನಾಬಾದ್, ಲಾಥೂರ್, ಸೋಲಾಪುರ್, ಮಘಾ, ಸಾಂಗ್ಲಿ, ಸತಾರ, ರತ್ನಗಿರಿ -ಸಿಂಧುದುರ್ಗ, ಕೊಲ್ಲಾಪುರ, ಹತ್ಕನಾಂಗ್ಲೆ ಸೇರಿ 9 ಕ್ಷೇತ್ರಗಳಿಗೆ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಸಂಭಾಲ್, ಹತ್ರಾಸ್, ಆಗ್ರಾ, ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನಾಪುರಿ, ಇಟಾಹ್, ಬದೌನ್, ಔನ್ಲಾ, ಬರೇಲಿ ಸೇರಿ 10 ಕ್ಷೇತ್ರಗಳಿಗೆ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಮಲ್ದಹಾ ಉತ್ತರ, ಮಲ್ದಹಾ ದಕ್ಷಿಣ, ಸಾಮಾನ್ಯ, ಜಂಗಿಪುರ್, ಮುಷಿದಾಬಾದ್ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
3ನೇ ಹಂತದಲ್ಲಿ 1351 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 2963 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪರಿಶೀಲನೆ ಬಳಿಕ 1563 ಊರ್ಜಿತಗೊಂಡಿವೆ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತಿನ ಗಾಂಧಿನಗರದಿಂದ , ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹುಬ್ಬಳ್ಳಿ-ಧಾರವಾಡದಿಂದ, ಭಗವಂತ್ ಖೂಬಾ ಬೀದರ್‌ನಿಂದ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾವೇರಿಯಿಂದ, ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸಿದ್ದಾರೆ.
ಅತ್ತ ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌವ್ಹಾಣ್ ವಿದೀಶದಿಂದ, ದಿಗ್ವಿಜಯ್ ಸಿಂಗ್ ರಾಜ್ಘರ್‌ನಿಂದ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಉತ್ತರಪ್ರದೇಶದ ಮೈನಾಪುರದಿಂದ, ಎನ್‌ಸಿಪಿಯ ನಾಯಕಿ ಸುಪ್ರಿಯಾ ಸುಳೆ ಮಹಾರಾಷ್ಟ್ರದ ಭಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈಗಾಗಲೇ ಏ.19 ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಏ.26 ರಂದು 88 ಕ್ಷೇತ್ರಗಳಿಗೆ ಮತದಾನ ನಡೆದಿದೆ.