Sunday, May 19, 2024
Homeರಾಜ್ಯಎಸ್‌ಐಟಿ ಮುಂದೆ ಹಾಜರಾಗುವಂತೆ ಪ್ರಜ್ವಲ್‌ ರೇವಣ್ಣ ಮೇಲೆ ಕುಟುಂಬಸ್ಥರು ಹಾಗೂ ಹಿತೈಷಿಗಳು ಒತ್ತಡ

ಎಸ್‌ಐಟಿ ಮುಂದೆ ಹಾಜರಾಗುವಂತೆ ಪ್ರಜ್ವಲ್‌ ರೇವಣ್ಣ ಮೇಲೆ ಕುಟುಂಬಸ್ಥರು ಹಾಗೂ ಹಿತೈಷಿಗಳು ಒತ್ತಡ

ಬೆಂಗಳೂರು,ಮೇ 6- ವಿಶೇಷ ತನಿಖಾ ತಂಡದ ಮುಂದೆ ಶೀಘ್ರದಲ್ಲೇ ಹಾಜರಾಗುವಂತೆ ಹಾಸನದ ಅಶ್ಲೀಲ ಪೆನ್‌ಡ್ರೈವ್‌ ಹಾಗೂ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರ ಮೇಲೆ ಅವರ ಕುಟುಂಬಸ್ಥರು ಹಾಗೂ ಹಿತೈಷಿಗಳು ಒತ್ತಡ ಹೇರುತ್ತಿದ್ದಾರೆ.

ಆರೋಪ ಕೇಳಿ ಬಂದ ಕೂಡಲೇ ರಾಜ್ಯಸರ್ಕಾರ ತನಿಖೆಗೆ ಎಸ್‌ಐಟಿ ರಚಿಸಿದೆ. ಎಸ್‌ಐಟಿ ಮುಂದೆ ಹಾಜರಾಗುವಂತೆ ಪ್ರಜ್ವಲ್‌ ರೇವಣ್ಣ ಅವರ ಕುಟುಂಬಸ್ಥರು, ಆಪ್ತರು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಎಸ್‌ಐಟಿ ವಿಚಾರಣೆಗೆ ಹಾಜರಾಗದೆ ದೂರ ಉಳಿದರೆ ಅನುಮಾನಗಳು ಹೆಚ್ಚಾಗುತ್ತಾ ಹೋಗುತ್ತವೆ. ಅಲ್ಲದೆ, ಈ ಆರೋಪ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿಚಾರಣೆಗೆ ಹಾಜರಾಗದೆ ರಕ್ಷಣೆ ಪಡೆಯುವುದು ಕಷ್ಟವಾಗಬಹುದು ಎಂಬ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ಆರೋಪ ಕೇಳಿಬಂದ ಕೂಡಲೇ ಪ್ರಜ್ವಲ್‌ ರೇವಣ್ಣ ಅವರು ವಿದೇಶಕ್ಕೆ ತೆರಳಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿಕೊಂಡಿದೆ. ಎಸ್‌ಐಟಿ ಕೂಡ ಪ್ರಜ್ವಲ್‌ ರೇವಣ್ಣ ಅವರ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್‌ ಹೊರಡಿಸಿದೆ. ಅವರನ್ನು ಬಂಧಿಸಲು ಎಲ್ಲಾ ರೀತಿಯ ಸಿದ್ಧತೆಯನ್ನೂ ಕೂಡ ಮಾಡಿಕೊಂಡಿದೆ.

ಈ ಹಂತದಲ್ಲಿ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದು ಒಳ್ಳೆಯದು. ಇಲ್ಲವೆ ಕಾನೂನು ಹೋರಾಟ ನಡೆಸಿದರೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗಬಹುದು. ವಿಚಾರಣೆಗೆ ಹಾಜರಾದರೆ ಸತ್ಯಾಂಶ ಕೂಡ ಹೊರಬರಲಿದೆ. ಈಗಾಗಲೇ ಕುಟುಂಬಕ್ಕೆ ಹಾಗೂ ಪಕ್ಷಕ್ಕೆ ಸಾಕಷ್ಟು ಮುಜುಗರ ಉಂಟಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ವಿಚಾರಣೆಯಿಂದ ದೂರ ಸರಿಯುವುದು ಸಮಂಜಸವಲ್ಲ. ಈ ವಿಚಾರದ ಬಗ್ಗೆ ಕೂಡಲೇ ವಕೀಲರ ಜೊತೆ ಮಾತುಕತೆ ನಡೆಸಿ ಆದಷ್ಟು ಶೀಘ್ರವಾಗಿ ಎಸ್‌ಐಟಿ ಮುಂದೆ ಹಾಜರಾಗುವಂತೆ ಸಲಹೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

RELATED ARTICLES

Latest News