ಬೆಂಗಳೂರು, ಡಿ.31- ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಸೇರಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ಗೋವಿಂದರಾಜನಗರದಲ್ಲಿ ಇಂದು ನಡೆದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮಣ್ಣ ಬರುತ್ತಾರೆ ಎಂದು ವದಂತಿ ಹಬ್ಬಿಸಲಾಗುತ್ತಿದೆ. ಆದರೆ, ಇದು ಸುಳ್ಳು. ಯಾವುದೇ ಕಾರಣಕ್ಕೂ ನಾನು ಬಿಜೆಪಿ ತೊರೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಕೇಂದ್ರ ವರಿಷ್ಠರಿಗೆ ನನಗಾದ ಅನ್ಯಾಯದ ಬಗ್ಗೆ ತಿಳಿಸಿದ್ದೇನೆ. ಅವರು ಕೂಡ ಎರಡು ಬಾರಿ ನನ್ನನ್ನು ದೆಹಲಿಗೆ ಕರೆದಿದ್ದಾರೆ. ಕಾರಣಾಂತರಗಳಿಂದ ಹೋಗಿಲ್ಲ. ಇನ್ನು ಮುಂದೆ ನನ್ನ ಮೇಲೆ ಗದಾಪ್ರಹಾರ ನಡೆಯದಂತೆ ನೋಡಿಕೊಳ್ಳುವುದು ವರಿಷ್ಠರಿಗೆ ಬಿಟ್ಟ ವಿಷಯ. ಮುಂದಿನ ಜ.10ರೊಳಗೆ ಎಲ್ಲ ಗೊಂದಲಗಳು ಬಗೆಹರಿಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೊಸ ವರ್ಷಾಚರಣೆ : 2 ಗಂಟೆವರೆಗೂ ಬಿಎಂಟಿಸಿ ಬಸ್ ಸಂಚಾರ
ಒಂದು ವೇಳೆ ನಾನು ಲೋಕಸಭೆ ಚುನಾವಣೆಗೆ ಸ್ರ್ಪಧಿಸಬೇಕು ಎಂದು ವರಿಷ್ಠರು ತೀರ್ಮಾನಿಸಿದರೆ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳುವ ಮೂಲಕ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾದಂತಾಗಿದೆ. ರಾಜಕೀಯ ನಿಂತ ನೀರಲ್ಲ. ದೊಡ್ಡವರ ಮಾತು ಕೇಳಿದೆ. ನೋವು ಮಾಡಿಕೊಂಡೆ. ನನ್ನ ಈ ಪರಿಸ್ಥಿತಿಗೆ ಕಾರಣರಾದವರ ಜತೆ ವರಿಷ್ಠರು ಚರ್ಚೆ ಮಾಡಿ ಎಲ್ಲವನ್ನೂ ಬಗೆಹರಿಸಬೇಕು ಎಂದು ಹೇಳಿದರು. ನಾನು ಯಾವುದೇ ಕಾಂಗ್ರೆಸ್ ನಾಯಕ ರನ್ನು ಭೇಟಿ ಮಾಡಿಲ್ಲ ಮತ್ತು ಲೋಕಸಭಾ ಟಿಕೆಟ್ ಕೇಳಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಡವರಿಗೆ, ಜನಸಾಮಾನ್ಯರಿಗೆ ಸ್ಪಂದಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಪರಾಭವಗೊಂಡ ಹಿನ್ನೆಲೆಯಲ್ಲಿ ಈಗ ನಮ್ಮ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ. ಇದು ಬೇಗ ಬಗೆಹರಿಯಲಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ಭವ್ಯ ಭಾರತ ನಿರ್ಮಾಣವಾಗಲಿದೆ. ಈಗಾಗಲೇ ಕೋಟ್ಯಂತರ ಜನರ ಆಶಯದಂತೆ ರಾಮಮಂದಿರ ನಿರ್ಮಾಣವಾಗಿದೆ. ದೇಶ ಪ್ರಗತಿ ಸಾಧಿಸುತ್ತಿದೆ. ಇದರಿಂದಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೇವ್‍ಪಾರ್ಟಿ ಮೇಲೆ ದಾಳಿ, ಡ್ರಗ್ಸ್ ಸೇವಿಸಿದ್ದ 80 ಮಂದಿ ಬಂಧನ
ಸೂರ್ಯ-ಚಂದ್ರ ಇರುವವರೆಗೂ ಕುವೆಂಪು ಹೆಸರು ಚಿರಸ್ಥಾಯಿಯಾಗಿರಲಿದೆ. ಕುವೆಂಪು ಅವರ ದೂರದೃಷ್ಟಿಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಮನುಜಮತ, ವಿಶ್ವಪಥ ಸಂದೇಶ ಸಾರಿ ಕುವೆಂಪು ಅವರು ವಿಶ್ವಮಾನವರಾದರು ಎಂದು ಅವರು ಹೇಳಿದರು.