ಮೈಸೂರು,ಅ.1- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ನಿವೇಶನಗಳನ್ನು ವಾಪಸ್ ನೀಡುವುದಾಗಿ ಪತ್ರ ಬರೆದ ನಂತರವೂ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಇಂದು ಬೆಳಿಗ್ಗೆ ವಿವಾದಿತ ಜಮೀನಿನ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ದೂರುದಾರರಾದ ಸ್ನೇಹಮಯಿ ಕೃಷ್ಣ ಅವರೊಂದಿಗೆ ಮುಡಾ ಅ„ಕಾರಿಗಳು ಲೋಕಾಯುಕ್ತದ ಪೊಲೀಸರು ಕೆಸರೆ ಗ್ರಾಮಕ್ಕೆ ತೆರಳಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದರು ಎಂದು ಹೇಳಲಾದ ಭೂಮಿಯ ಪರಿಶೀಲನೆ ನಡೆಸಿದರು.ಈ ವೇಳೆ ಪೊಡಿ, ನಕ್ಷೆ ಹಾಗೂ ಇತರ ದಾಖಲಾತಿಗಳೊಂದಿಗೆ ಸ್ಥಳದಲ್ಲಿ ಮಹಜರು ನಡೆಸಲಾಯಿತು.
ಈ ವೇಳೆ ಪಾರ್ವತಿಯವರದು ಎಂದು ಹೇಳಲಾದ ಜಾಗವನ್ನು ಮುಡಾ ಅಭಿವೃದ್ಧಿಪಡಿಸಿ ನಿವೇಶನಗಳನ್ನಾಗಿ ವಿಂಗಡಿಸುವುದು, ನಿವೇಶನ ಸಂಖ್ಯೆಗಳ ಫಲಕಗಳನ್ನು ನೆಟ್ಟಿರುವುದು, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕೆಲಸಗಳು ಪೂರ್ಣಗೊಂಡಿರುವುದು ಕಂಡುಬಂದಿತ್ತು. ಈ ಸ್ಥಳದಲ್ಲಿ ಸುತ್ತಮುತ್ತ ಹಲವು ಬೃಹತ್ ಕಟ್ಟಡಗಳು ನಿರ್ಮಾಣಗೊಂಡಿರುವುದು ಕಾಣಸಿಗುತ್ತಿದೆ.
ಮಲ್ಲಿಕಾರ್ಜುನ ಸ್ವಾಮಿಯವರು ದೇವರಾಜು ಅವರಿಂದ ಜಮೀನನ್ನು ಖರೀದಿಸಿದ್ದರು. ಅನಂತರ ತಮ್ಮ ಸಹೋದರಿ ಆಗಿರುವ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಅರಿಶಿನ ಕುಂಕುಮಕ್ಕೆ ಭೂಮಿಯನ್ನು ಉಡುಗೊರೆ ನೀಡಿದ್ದರು ಎಂದು ಹೇಳಲಾಗಿದೆ.
ಈ ಜಮೀನಿನ ಪರಭಾರೆಯೇ ಅಕ್ರಮ ಎಂಬುದು ಸ್ನೇಹಮಯಿ ಕೃಷ್ಣ ಅವರ ದೂರಾಗಿದೆ. ಹೀಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ತನಿಖೆ ಕೈಗೆತ್ತಿಕೊಂಡಿರುವ ಲೋಕಾಯುಕ್ತ ಪೊಲೀಸರು ಇಂದು ಪ್ರಥಮವಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ , ದಾಖಲೆಗಳಿಗೆ ಸಂಬಂ„ಸಿದ ಯಾವುದೇ ನೋಟಿಸ್ ಬಂದಿಲ್ಲ. ಆದರೆ, ವಿಚಾರಣೆಯಲ್ಲಿ ಯಾವುದೇ ದಾಖಲಾತಿ ಕೋರಿದ್ದರೆ ನಾನು ಕೊಡಲು ಸಿದ್ಧ ಎಂದರು.
ಮೊದಲು ದೂರು ನೀಡಿದ ಸಂದರ್ಭದಲ್ಲಿ ದಾಖಲಾತಿಗಳನ್ನು ಈಗಾಗಲೇ ಕೊಟ್ಟಿದ್ದೇನೆ. ಈಗ ಮತ್ತೆ ವಿಚಾರಣೆ ಸಂದರ್ಭದಲ್ಲಿ ದಾಖಲಾತಿಗಳನ್ನು ಕೇಳಿದರೆ ಕೊಡಲು ಸಿದ್ಧ. ಇದರ ಜೊತೆಗೆ ಮುಡಾದಲ್ಲಿ ನಡೆದ ಎಲ್ಲಾ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂಬುದು ನನ್ನ ಒತ್ತಾಯ ಎಂದರು.
ಹೋರಾಟಕ್ಕೆ ಸಿಕ್ಕ ಜಯ ಇಡಿಯಲ್ಲಿ ಎಫ್ ಐಆರ್ ದಾಖಲಾಗಿದೆ. ಸಿಎಂ ಪತ್ನಿ ಪಾರ್ವತಿ 14 ನಿವೇಶನಗಳನ್ನು ಹಿಂತಿರುಗಿಸುವುದಾಗಿ ಮುಡಾಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಸುಳ್ಳು ಆರೋಪ ಮಾಡುವುದಿಲ್ಲ. ಈವರೆಗಿನ ಎಲ್ಲಾ ಪ್ರಕರಣಗಳಲ್ಲೂ ಜಯ ಗಳಿಸಿದ್ದೇನೆ. ಅದೇ ರೀತಿ ಇಲ್ಲೂ ಜಯ ಗಳಿಸುವ ವಿಶ್ವಾಸವಿದೆ. ನನ್ನ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ ಎಂದು ಹೇಳಿದರು.