ಶಿವಮೊಗ್ಗ,ಏ.23– ಜಮ್ಮು-ಕಾಶ್ಮೀರದ ಪಹಲ್‌ಗಾಮ್ ನಲ್ಲಿ ನಡೆದ ದಾಳಿಯಲ್ಲಿ ಹತ್ಯೆಯಾದ ಮಂಜುನಾಥ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ
ಮಧುಬಂಗಾರಪ್ಪ ಸೇರಿದಂತೆ ಅನೇಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮಂಜುನಾಥ್ ರವರ ತಾಯಿ ಹಾಗೂ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಅನೇಕರು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಮಾನಸಿಕ ಸ್ಥೆರ್ಯ ತುಂಬಿದ್ದಾರೆ. ತಮ್ಮ ಪತಿ ಆಗಲಿ ನಾಲ್ಕು ವರ್ಷವಾಗಿತ್ತು. ಆ ದುಃಖದಿಂದ ಹೊರಬರಲಾಗದೆ ಒದ್ದಾಡುತ್ತಿರುವಾಗಲೇ ಈ ದುರಂತ ನಡೆದಿದೆ ಎಂದು ಮಂಜುನಾಥ್ ಅವರ ತಾಯಿ ಅಳಲು ತೋಡಿಕೊಂಡರು.
ಸಚಿವ ಮಧುಬಂಗಾರಪ್ಪ ಅವರೊಂದಿಗೆ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಬಿಜೆಪಿ ಶಾಸಕ ಚನ್ನಬಸಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಮ್ಮು-ಕಾಶ್ಮೀರದಿಂದ ಮೃತದೇಹವನ್ನು ತರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ದುರ್ಘಟನೆ ನಡೆಯಬಾರದಿತ್ತು. ರಾಜ್ಯದ ಮೂವರು ಮೃತಪಟ್ಟಿದ್ದಾರೆ. ಎಂದು ಸಚಿವ ಮಧುಬಂಗಾರಪ್ಪ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಮಂಜುನಾಥ್ ರವರ ಪುತ್ರ ಪಿಯುಸಿಯಲ್ಲಿ ಶೇ.97 ರಷ್ಟು ಅಂಕ ಪಡೆದು ಡಿಸ್ಟಿಂಕ್ಷನ್ ವಿದ್ಯಾರ್ಥಿಯಾಗಿದ್ದ. ಆತನನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಲೇಜಿಗೆ ಸೇರಿಸಲು ವಿಚಾರಿಸಲಾಗುತ್ತಿತ್ತು. ಫಲಿತಾಂಶ ಬಂದ ಖುಷಿಯಲ್ಲಿ ಪ್ರವಾಸ ಹೋಗಿದ್ದರು ಎಂದು ಕುಟುಂಬದ ಸದಸ್ಯರು ವಿವರಿಸಿದ್ದಾರೆ.
ನಿಮ್ಮ ಮಗನ ಜೀವಹಾನಿಯಿಂದಾಗಿರುವ ನಷ್ಟವನ್ನು ನಾವು ಭರಿಸಲು ಸಾಧ್ಯವಿಲ್ಲ. ಆದರೆ ಉಳಿದಂತೆ ಅವರ ಪುತ್ರನ ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ರೀತಿಯ ಜವಾಬ್ದಾರಿ. ನಮ್ಮ ಹೊಣೆಗಾರಿಕೆ. ನಮ್ಮ ಕುಟುಂಬ ನಿಮ್ಮ ಜೊತೆಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಂಜುನಾಥ್‌ರವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.