ಮಧುಗಿರಿ, ಜ.3- ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನವರ ವಿರುದ್ಧ ಕೇಳಿ ಬಂದಿದ್ದು, ಘಟನೆಯಿಂದ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ.
ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನವರು ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಬಂದ ಮಹಿಳೆಯನ್ನು ತನ್ನ ಕಚೇರಿಯಲ್ಲಿನ ಏಕಾಂತ ಗೃಹ ಅಥವಾ ಶೌಚಾಲಯದಲ್ಲಿ ಕರೆದುಕೊಂಡು ಹೋಗಿದ್ದು ಅನೈತಿಕ ಚಟುವಟಿಕೆ ಆರಂಭಿಸಿದ್ದು, ಇದನ್ನು ಕೆಲವರು ಕಿಟಕಿಯ ಮೂಲಕ ಚಿತ್ರೀಕರಣ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದೊಂದು ಪೊಲೀಸ್ ಇಲಾಖೆಯ ಗೌರವವನ್ನು ಮಣ್ಣುಪಾಲು ಮಾಡುವಂತ ನೀಚ ಕೃತ್ಯವಾಗಿದ್ದು, ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು, ನಾನೂ ಸಹ ವೀಡಿಯೋ ವೀಕ್ಷಣೆ ಮಾಡಿದ್ದೇನೆ. ಈ ವಿಚಾರ ಬಗ್ಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.
ಯಾವುದೇ ಕಾರಣಕ್ಕೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಇಲಾಖೆ ಸಹಿಸಿಕೊಳ್ಳಲ್ಲ. ಮಹಿಳೆಯನ್ನು ಪತ್ತೆ ಹಚ್ಚಲಾಗುತ್ತಿದ್ದು, ಅವರು ದೂರು ನೀಡಿದಲ್ಲಿ ಡಿವೈಎಸ್ಪಿ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ಎಸ್ಪಿ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.